ಹೆಣ್ಣು ಭ್ರೂಣ ಹತ್ಯೆ ಪ್ರಕರಣ: 12 ಆರೋಪಿಗಳ ಬಂಧನ

KannadaprabhaNewsNetwork |  
Published : Sep 05, 2024, 12:34 AM IST
4ಕೆಎಂಎನ್‌ಡಿ-5ಮಂಡ್ಯದ ಎಸ್‌ಪಿ ಕಚೇರಿಯಲ್ಲಿ ಹೆಣ್ಣು ಭ್ರೂಣಹತ್ಯೆ ಪ್ರಕರಣದ ಆರೋಪಿಗಳ ಬಂಧನ ಕುರಿತು ಜಿಲ್ಲಾ ಪೊಲೀಸ್‌ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಮಾಹಹಿತಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ಇದ್ದರು. | Kannada Prabha

ಸಾರಾಂಶ

ಬಡ ಹಾಗೂ ಮಧ್ಯಮ ವರ್ಗದವರಿಂದ 25 ರಿಂದ 30 ಸಾವಿರ ರು. ಹಾಗೂ ಸಿರಿವಂತರೆಂದು ತಿಳಿದುಬಂದರೆ 1 ಲಕ್ಷ ರು.ವರೆಗೂ ವಸೂಲಿ ಮಾಡುತ್ತಿದ್ದರು. ಕೇವಲ ಆರೇಳು ಸಾವಿರ ರು. ಗಳಿಗೆ ಸ್ಕ್ಯಾನಿಂಗ್ ಮಾಡಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಕಿಂಗ್ ಪಿನ್‌ಗಳೆನ್ನಲಾದ ಪ್ರಮುಖ ಆರೋಪಿಗಳಿಬ್ಬರು ಸೇರಿ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಪಾಂಡವಪುರ ತಾಲೂಕು ಎಂ.ಶೆಟ್ಟಿಹಳ್ಳಿ ಗ್ರಾಮದ ಅಭಿಷೇಕ್, ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಗ್ರಾಮದ ವೀರೇಶ್ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ. ಉಳಿದಂತೆ ಪುಟ್ಟರಾಜು, ಕುಮಾರ, ಶಾರದಮ್ಮ, ದಾಸೇಗೌಡ, ಲ್ಯಾಬ್‌ಸತ್ಯ, ಮೀನಾ, ಮಲ್ಲಿಕಾರ್ಜುನ, ಸೋಮಶೇಖರ್, ರತ್ನಮ್ಮ, ಪ್ರೇಮ ಉ. ಪಾರ್ವತಿ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ. 12 ಮಂದಿ ಆರೋಪಿಗಳು ಸೇರಿ ಒಟ್ಟಾರೆ ಈ ಪ್ರಕರಣದಲ್ಲಿ 32 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಸುಮಾರು 23 ಲಕ್ಷ ರು. ಮೌಲ್ಯದ 2 ಸ್ಕ್ಯಾನಿಂಗ್ ಉಪಕರಣಗಳು, 3 ಕಾರು, 3 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ವೈದ್ಯರು- ದಾದಿಯರಿಂದ ಮಾಹಿತಿ:

ಕೆ.ಆರ್. ಪೇಟೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ನಡೆಸುತ್ತಿದ್ದ ಡಾ.ಮಲ್ಲಿಕಾರ್ಜುನ್ ಬಳಿ ಅಣ್ಣನ ಮಗನಾಗಿರುವ ಆರೋಪಿ ವೀರೇಶ್ ಕೆಲಸ ಮಾಡಿಕೊಂಡಿದ್ದನು. ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ವೀರೇಶ್ ವೈದ್ಯರಿಂದಲೇ ಸ್ವಲ್ಪ ಮಟ್ಟಿಗೆ ಸ್ಕ್ಯಾನಿಂಗ್ ಮಾಡುವುದನ್ನು ಕಲಿತಿದ್ದ. ಮತ್ತೊಬ್ಬ ಆರೋಪಿ ಅಭಿಷೇಕ್ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿನ ದಾದಿಯರನ್ನು ಸಂಪರ್ಕಿಸಿ ಅವರಿಂದ ಸ್ವಲ್ಪ ಮಟ್ಟಿಗೆ ಭ್ರೂಣದ ಕುರಿತಂತೆ ಮಾಹಿತಿ ಪಡೆದಿದ್ದು, ನಂತರದ ದಿನಗಳಲ್ಲಿ ಭ್ರೂಣ ಪತ್ತೆ ಮತ್ತು ಹತ್ಯೆಯಂತಹ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂದು ಹೇಳಿದರು.

ಆರೋಪಿಗಳು ಸಣ್ಣ ಪುಟ್ಟ ಆಸ್ಪತ್ರೆಗಳು, ಆಸ್ಪತ್ರೆಗಳ ವಸತಿಗೃಹಗಳು, ಇನ್ನಿತರೆ ಸ್ಥಳಗಳಲ್ಲಿ ಭ್ರೂಣ ಪತ್ತೆ ಮಾಡುತ್ತಿದ್ದರು. ನಂತರ ಮಾತ್ರೆಗಳ ಕಿಟ್‌ಗಳನ್ನು ನೀಡಿ ಗರ್ಭಪಾತ ಮಾಡಿಸುತ್ತಿದ್ದರು ಎಂದು ತಿಳಿಸಿದರು.

ಹೆಚ್ಚು ಹಣ ವಸೂಲಿ:

ಬಡ ಹಾಗೂ ಮಧ್ಯಮ ವರ್ಗದವರಿಂದ 25 ರಿಂದ 30 ಸಾವಿರ ರು. ಹಾಗೂ ಸಿರಿವಂತರೆಂದು ತಿಳಿದುಬಂದರೆ 1 ಲಕ್ಷ ರು.ವರೆಗೂ ವಸೂಲಿ ಮಾಡುತ್ತಿದ್ದರು. ಕೇವಲ ಆರೇಳು ಸಾವಿರ ರು. ಗಳಿಗೆ ಸ್ಕ್ಯಾನಿಂಗ್ ಮಾಡಿಸುತ್ತಿದ್ದರು.ಉಳಿದಂತೆ ಮಧ್ಯವರ್ತಿಗಳೇ ಹೆಚ್ಚು ಹಣ ವಸೂಲಿ ಮಾಡುತ್ತಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆರೋಪಿಗಳು ದಾವಣಗೆರೆ, ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಭ್ರೂಣ ಪತ್ತೆ ಮತ್ತು ಹತ್ಯೆ ಮಾಡಿದ್ದರೆಂದು ಹೇಳಲಾಗಿದ್ದು, ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.

ಜಂಟಿ ಕಾರ್ಯಾಚರಣೆ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಮಾತನಾಡಿ, ರಾಜ್ಯಾದ್ಯಂತ ಹೆಚ್ಚು ಗಮನ ಸೆಳೆದಿದ್ದ ಈ ಪ್ರಕರಣವನ್ನು ಬೇಧಿಸಬೇಕೆಂಬ ಕಾರಣಕ್ಕೆ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರಿಂದ ಇದು ಸಾಧ್ಯವಾಗಿದೆ ಎಂದರು.

ಭ್ರೂಣ ಹತ್ಯೆ ಪ್ರಕರಣವನ್ನು ಪತ್ತೆ ಮಾಡಲು ನಾವು ಗರ್ಭಿಣಿ ಮಹಿಳೆಯೊಬ್ಬರನ್ನು ಸ್ಕ್ಯಾನಿಂಗ್‌ಗೆ ಕಳುಹಿಸಿದ್ದೆವು. ಆದರೆ ಸ್ವಲ್ಪದರಲ್ಲಿ ತಪ್ಪಿತು. ನಂತರ ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

ಪ್ರಕರಣವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಗುವುದು ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಅಪರ ಪೊಲೀಸ್ ಅಧೀಕ್ಷಕರಾದ ತಿಮ್ಮಯ್ಯ. ಇ.ಎಸ್. ಗಂಗಾಧರಸ್ವಾಮಿ ಗೋಷ್ಠಿಯಲ್ಲಿದ್ದರು.

--------

ಬಾಕ್ಸ್.......

ಕೆಲ ವೈದ್ಯರ ಆತ್ಮಹತ್ಯೆ:ಈ ಪ್ರಕರಣ ಹೊರಬರುತ್ತಿದ್ದಂತೆ ಕೆಲ ವೈದ್ಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಸಾಮ್ಯತೆ ಇರಬಹುದು ಎನ್ನಲಾಗಿದೆ. ಆರೋಪಿಗಳಾದ ಅಭಿಷೇಕ್ ಮತ್ತು ವೀರೇಶ್ ಅಲ್ಲದೆ, ಮತ್ತೊಬ್ಬ ಪ್ರಮುಖ ಆರೋಪಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಆತನನ್ನೂ ಬಂಧಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಹೇಳಿದರು.ಭ್ರೂಣ ಪತ್ತೆಗೆ ಉಪಯೋಗಿಸುತ್ತಿದ್ದ ಒಂದು ಸ್ಕ್ಯಾನಿಂಗ್ ಯಂತ್ರವನ್ನು ಬಯ್ಯಪ್ಪನಹಳ್ಳಿ ಪೊಲೀಸರು, ಮತ್ತೊಂದನ್ನು ಚನ್ನರಾಯಪಟ್ಟಣ ಪೊಲೀಸರು ಹಾಗೂ ಎರಡು ಯಂತ್ರಗಳನ್ನು ಮಂಡ್ಯ ಪೊಲೀಸರು ವಶಪಡಿಸಿಕೊಂಡಿದ್ದು, ಮತ್ತೊಂದು ಯಂತ್ರ ಇನ್ನೂ ಸಿಕ್ಕಿರುವುದಿಲ್ಲ ಎಂದು ತಿಳಿಸಿದರು.

------

ಬಾಕ್ಸ್.........

ನಾಲ್ವರು ಇನ್ನೂ ನಾಪತ್ತೆ:ಪಾಂಡವಪುರ ಪ್ರಕರಣದಲ್ಲಿ 19 ಮಂದಿ ಆರೋಪಿಗಳ ಪೈಕಿ 12 ಮಂದಿ, ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ 7 ಆರೋಪಿಗಳ ಪೈಕಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ನಾಲ್ವರು ತಲೆ ಮರೆಸಿಕೊಂಡಿದ್ದಾರೆ. ನಾಗಮಂಗಲ ತಾಲೂಕಿನ ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದರು.ಇದೇ ರೀತಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಈ ತಂಡ ಹೆಣ್ಣು ಭ್ರೂಣವನ್ನು ಅಕ್ರಮವಾಗಿ ಸ್ಕ್ಯಾನಿಂಗ್ ಮೂಲಕ ಪತ್ತೆ ಮಾಡಿ ಏಜೆಂಟರುಗಳಾದ ಆಶಾ ಕಾರ್ಯಕರ್ತೆಯರು, ಖಾಸಗಿ ಲ್ಯಾಬ್ ಟೆಕ್ನಿಷಿಯನ್ ಮೂಲಕ ಲಿಂಗಪತ್ತೆ ಮತ್ತು ಭ್ರೂಣ ಹತ್ಯೆ ಮಾಡಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ