ತೊಗರಿ ಬೀಜಗಳಿಗೆ ಶಿಲೀಂಧ್ರನಾಶಕ, ಅಲಸಂಧೆ ಬೀಜಗಳಿಗೆ ಟ್ರೈಕೋಡರ್ಮಾ ಮತ್ತು ಭತ್ತದ ಸಸಿಗಳಿಗೆ ಅಜೋಸ್ಪಿರಿಲಮ್ ಜೈವಿಕ ಗೊಬ್ಬರದ ದ್ರಾವಣದಲ್ಲಿ ಅದ್ದುವ ವಿಧಾನವನ್ನು ಹಾಗೂ ಬೀಜಾಮೃತ ತಯಾರಿಕೆಯನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರಲ್ಲದೆ, ಬೀಜೋಪಚಾರದಲ್ಲಿ ಜೈವಿಕ ನಿಯಂತ್ರಣಕಾರಕಗಳ ಬಳಕೆ ಮತ್ತು ಅವುಗಳ ಮಹತ್ವದ ಕುರಿತು ರೈತರಿಗೆ ಮಾಹಿತಿ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಸಿಂಗ್ರಿಗೌಡನಕೊಪ್ಪಲು ಗ್ರಾಮದಲ್ಲಿ ಮಂಡ್ಯದ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಆರ್‌ಎಡಬ್ಲ್ಯೂಇ ಕಾರ್ಯಕ್ರಮದಡಿ ರೋಗ ನಿರ್ವಹಣೆಗಾಗಿ ಬೀಜೋಪಚಾರ ಎಂಬ ವಿಷಯ ಕುರಿತು ಕ್ಷೇತ್ರ ಪ್ರಾತ್ಯಕ್ಷಿಕೆ ನಡೆಸಿದರು.
ತೊಗರಿ ಬೀಜಗಳಿಗೆ ಶಿಲೀಂಧ್ರನಾಶಕ, ಅಲಸಂಧೆ ಬೀಜಗಳಿಗೆ ಟ್ರೈಕೋಡರ್ಮಾ ಮತ್ತು ಭತ್ತದ ಸಸಿಗಳಿಗೆ ಅಜೋಸ್ಪಿರಿಲಮ್ ಜೈವಿಕ ಗೊಬ್ಬರದ ದ್ರಾವಣದಲ್ಲಿ ಅದ್ದುವ ವಿಧಾನವನ್ನು ಹಾಗೂ ಬೀಜಾಮೃತ ತಯಾರಿಕೆಯನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರಲ್ಲದೆ, ಬೀಜೋಪಚಾರದಲ್ಲಿ ಜೈವಿಕ ನಿಯಂತ್ರಣಕಾರಕಗಳ ಬಳಕೆ ಮತ್ತು ಅವುಗಳ ಮಹತ್ವದ ಕುರಿತು ರೈತರಿಗೆ ವಿಸ್ತಾರವಾಗಿ ವಿವರಿಸಿದರು.
ಮಾಸ್ಕ್ ಮತ್ತು ಗ್ಲೋವ್ಸ್‌ಗಳಂತಹ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಧರಿಸಿ ಈ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಾಯಿತು ಹಾಗೂ ರೈತರಿಗೂ ಸಹ ಇವುಗಳನ್ನು ಬಳಸುವಂತೆ ತಿಳಿಸಲಾಯಿತು. ಸುಮಾರು 20 ರೈತರು ಇದರ ಪ್ರಯೋಜನ ಪಡೆದರು.
ಕೃಷಿ ಮಹಾವಿದ್ಯಾಲಯದ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಶೇರಖಾನೆ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ರೇಷ್ಮೆ ಕೃಷಿ ತಾಂತ್ರಿಕ ಜ್ಞಾನ ಕುರಿತು ಅರಿವು ಕಾರ್ಯಕ್ರಮದಲ್ಲಿ ಡಾ.ಎಂ.ರಾಜು ಹಾಗೂ ಡಾ.ಪ್ರವೀಣ್ ಅವರು ರೈತರಿಗೆ ರೇಷ್ಮೆ ಕೃಷಿಯ ಮಹತ್ವ, ರೇಷ್ಮೆ ಹುಳು ಸಾಕಾಣಿಕೆಯ ವೈಜ್ಞಾನಿಕ ವಿಧಾನಗಳು, ಹುಳುಗಳ ನಿರ್ವಹಣೆ, ಗುಣಮಟ್ಟದ ರೇಷ್ಮೆ ಉತ್ಪಾದನೆ ಹಾಗೂ ರೇಷ್ಮೆ ಕೃಷಿಯಿಂದ ದೊರೆಯುವ ಹೆಚ್ಚುವರಿ ಆದಾಯದ ಕುರಿತು ಮಾಹಿತಿ ನೀಡಿದರು. ಸುಮಾರು 120ಕ್ಕೂ ಹೆಚ್ಚು ರೈತರು ಪಾಲ್ಗೊಂಡು ವಿಷಯಗಳನ್ನು ಕೇಳಿ ತಿಳಿದುಕೊಂಡರು.
ಗುಣಮಟ್ಟದ ರೇಷ್ಮೆ ಮೊಟ್ಟೆಗಳನ್ನು ಆಯ್ಕೆ ಮಾಡುವುದು, ಆರೋಗ್ಯಕರ ರೇಷ್ಮೆ ಹುಳುಗಳನ್ನು ಬೆಳೆಸುವುದು, ಹುಳುಗಳಿಗೆ ಸರಿಯಾದ ಸಮಯದಲ್ಲಿ ಮತ್ತು ಸಮರ್ಪಕ ಪ್ರಮಾಣದಲ್ಲಿ ಹಿಪ್ಪುನೇರಳೆ ಎಲೆಗಳನ್ನು ನೀಡುವುದು, ಹುಳುಗಳ ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ರೋಗಬಾಧೆ ಕಂಡುಬಂದಾಗ ಅನುಸರಿಸಬೇಕಾದ ನಿಯಂತ್ರಣ ವಿಧಾನಗಳ ಬಗ್ಗೆಯೂ ಮಾರ್ಗದರ್ಶನ ನೀಡಲಾಯಿತು.
ರೇಷ್ಮೆ ಹುಳು ಸಾಕಾಣಿಕೆ ಕೊಠಡಿಯ ಸ್ವಚ್ಛತೆ, ಉಪಕರಣಗಳ ಶುದ್ಧೀಕರಣ, ಹುಳುಗಳಿಗೆ ಸೂಕ್ತ ಗಾಳಿ ಸಂಚಾರ, ತ್ಯಾಜ್ಯ ನಿರ್ವಹಣೆ ಮತ್ತು ಕೀಟನಾಶಕಗಳ ಸುರಕ್ಷಿತ ಬಳಕೆಯ ಕುರಿತು ರೈತರಿಗೆ ಪ್ರಾಯೋಗಿಕ ಸಲಹೆಗಳನ್ನು ನೀಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.