ಬರಗಾಲ ಘೋಷಿಸದಿದ್ದರೆ ಉಗ್ರ ಹೋರಾಟ: ಕರಿಬಸಪ್ಪ ಗೌಡ

KannadaprabhaNewsNetwork |  
Published : Jul 13, 2026, 12:15 AM IST
12ಎಚ್.ಎಲ್.ಐ2  ಪಟ್ಟಣದಲ್ಲಿ ರಾಜ್ಯರೈತಸಂಘ, ಹಸಿರುಸೇನೆಯವತಿಯಿಂದ ಬರಗಾಲ ಘೋಷಣೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ    ರಾಜ್ಯಅಧ್ಯಕ್ಷ  ಕರಿಬಸಪ್ಪ ಗೌಡ ಅವರು ಮಾತನಾಡಿದರು. | Kannada Prabha

ಸಾರಾಂಶ

ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಲ್ಲಿ ಹಸಿರು ಬರಗಾಲವಿದೆ. ಈ ಕೂಡಲೇ ಸಂಬಂಧಪಟ್ಟ ಖಾತೆ ಸಚಿವರು ಹಾಗೂ ಮುಖ್ಯಮಂತ್ರಿ ಬರಗಾಲ ಘೋಷಣೆ ಮಾಡಬೇಕು. ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಯುವ ಘಟಕದ ರಾಜ್ಯ ಆಧ್ಯಕ್ಷ ಕರಿಬಸಪ್ಪಗೌಡ ಹೇಳಿದ್ದಾರೆ.

- ಭೀಕರ ಸ್ಥಿತಿ ಸಿಎಂಗೆ ಗೊತ್ತು ಮಾಡಲು ಹೋರಾಟದ ಹಾದಿಯೊಂದೇ ಬಾಕಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಲ್ಲಿ ಹಸಿರು ಬರಗಾಲವಿದೆ. ಈ ಕೂಡಲೇ ಸಂಬಂಧಪಟ್ಟ ಖಾತೆ ಸಚಿವರು ಹಾಗೂ ಮುಖ್ಯಮಂತ್ರಿ ಬರಗಾಲ ಘೋಷಣೆ ಮಾಡಬೇಕು. ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಯುವ ಘಟಕದ ರಾಜ್ಯ ಆಧ್ಯಕ್ಷ ಕರಿಬಸಪ್ಪಗೌಡ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಬರಗಾಲ ಘೋಷಣೆ ಮಾಡಬೇಕಾದರೆ ಆಗಸ್ಟ್ ತಿಂಗಳವರೆಗೂ ಕಾಯಬೇಕು ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ಬರಗಾಲ ಎದುರಿಸಲು ಸಿದ್ಧರಾಗಿ ಎಂದಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದರೆ ಸಚಿವರು ಹಾಗೂ ಸಿಎಂ ಅವರ ಹೇಳಿಕೆ ನಡುವೆ ತಾಳೆ ಇಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.

ಏಪ್ರಿಲ್, ಮೇ, ಜೂನ್, ಜುಲೈ ತಿಂಗಳಲ್ಲಿ ವಾಡಿಕೆ ಮಳೆ ಎಷ್ಟಿತ್ತು, ಎಷ್ಟು ಮಳೆ ಕೊರತೆಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಇವರಿಗೆ ಇನ್ನೆಷ್ಟು ಕಾಲ ಬೇಕಾಗುತ್ತದೆ? ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಬೇಡಿ. ತಿಂಗಳ ಹಿಂದೆ ಒಂದಿಷ್ಟು ಉತ್ತಮ ಮಳೆಯಾದ ಸಂದರ್ಭದಲ್ಲಿ ರೈತರು ಬಿತ್ತನೆ ಮಾಡಿದ್ದರು. ಅನಂತರ ಮಳೆ ಇಲ್ಲದೇ ಬೆಳೆಗಳು ಒಣಗಿವೆ. ಇತ್ತೀಚೆಗೆ ಸುರಿದ ಮಳೆಯಿಂದ ರೈತರು ಬಿತ್ತನೆಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದರು. ಬಿತ್ತನೆ ಮಾಡಿದ ಬೀಜ ಭೂಮಿಯೊಳಗೆ ಹುದುಗಿದೆ. ಇದಕ್ಕಿಂತ ಭೀಕರ ಸ್ಥಿತಿ ಸಿಎಂಗೆ ಗೊತ್ತು ಮಾಡಲು ಹೋರಾಟದ ಹಾದಿಯೊಂದೇ ಬಾಕಿ ಎಂದು ಹೇಳಿದರು.

ಹೊನ್ನಾಳಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ನಿಷ್ಕ್ರಿಯವಾಗಿದೆ. ಕಳೆದ ಏಳು ವರ್ಷಗಳ ಹಿಂದೆ ಕೆರೆಗಳನ್ನು ತುಂಬಿಸುವ ಯೋಜನೆಗೆ ಈ ಸರ್ಕಾರಗಳು ಚಾಲನೆ ನೀಡಿದ್ದವು. ಅದಕ್ಕೆ ಸಂಬಂಧಿಸಿದ ಪೈಪ್‌ಲೈನ್ ಕಾಮಗಾರಿ ಮುಗಿದಿದ್ದರೂ ವಿದ್ಯುತ್ ಸಂಪರ್ಕ ಕೊಡದೇ ಇರುವುದರಿಂದ ಕೆರೆಗಳಿಗೆ ನೀರು ತುಂಬಿಸಲು ಆಗಿಲ್ಲ. ಸುಮಾರು ₹520 ಕೋಟಿ ದುರುಪಯೋಗವಾಗಿದೆ ಎಂದು ಆರೋಪಿಸಿದರು.

ಜೆ.ಜೆ.ಎಂ. ಯೋಜನೆ ವಿಫಲ:

ತಾಲೂಕಿನಲ್ಲಿ ಜೆಜೆಎಂ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ. ಬಸಪ್ಪ ಆರೋಪಿಸಿದರು. ಇದರಿಂದ ಸಾವಿರಾರು ಕೋಟಿ ಅನುದಾನ ಗುಳುಂ ಆಗಿದೆ. ನಮ್ಮ ಶಾಸಕರೂ ಸೇರಿದಂತೆ ರಾಜ್ಯದ ಯಾವ ಶಾಸಕರು ಸೊಲ್ಲೆತ್ತುತ್ತಿಲ್ಲ. ಮಾಜಿ ಶಾಸಕರು ಹಾಗೂ ಹಾಲಿ ಶಾಸಕರು ಹೊಂದಾಣಿಕೆಯ ರಾಜಕೀಯ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ರೈತ ಮುಖಂಡರಾದ ಸಾಸ್ವೆಹಳ್ಳಿ ರಾಜಪ್ಪ, ರೆಹಮಾನ್ ಸಾಬ್, ಗೋಣಿಗೆರೆ ಕುಬೇರಪ್ಪ, ಗೋಪಾಲಪ್ಪ, ನಾರಾಯಣಮೂರ್ತಿ, ಲಿಂಗನಗೌಡ ಸೊರಟೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

- - -

-12ಎಚ್.ಎಲ್.ಐ2:

ಹೊನ್ನಾಳಿ ಪಟ್ಟಣದಲ್ಲಿ ರಾಜ್ಯ ರೈತ ಸಂಘ, ಹಸಿರುಸೇನೆ ವತಿಯಿಂದ ಬರಗಾಲ ಘೋಷಣೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ರಾಜ್ಯ ಅಧ್ಯಕ್ಷ ಕರಿಬಸಪ್ಪ ಗೌಡ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

​ಜಗಳೂರು ತಾಲೂಕಿನ ೨೪ ಕೆರೆಗಳಿಗೆ ಹರಿದ ತುಂಗಭದ್ರೆ
ಜೋಗ ಜಲಪಾತ ವೀಕ್ಷಣೆಗೆ ಮುಗಿಬಿದ್ದ ಜನ