ಕನ್ನಡ ಪ್ರಭ ವಾರ್ತೆ ತಾಳಗುಪ್ಪ
ಪುನರ್ವಸು ಮಳೆಯಿಂದ ಮೈದುಂಬಿ ಬೋರ್ಗರೆಯುತ್ತಿರುವ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ವಾರಾಂತ್ಯದ ಶನಿವಾರ ಮತ್ತು ಭಾನುವಾರ ಸಾವಿರಾರು ಪ್ರವಾಸಿಗರು ಜೋಗದತ್ತ ಧಾವಿಸಿದ್ದರು.ಕಳೆದ ಮೂರು ದಿನಗಳಿಂದ ಬಿರುಸಿನ ಮಳೆ ಕಡಿಮೆಯಾಗಿ ಜಲಪಾತ ನಿಚ್ಚಳವಾಗಿ ಕಾಣಿಸುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಜಲಪಾತದಲ್ಲಿ ನೀರಿನ ಹರಿವು ಸ್ವಲ್ಪ ಕಡಿಮೆಯಾಗಿದ್ದರೂ ಜಲಪಾತ ಕಳೆಗುಂದಿಲ್ಲ.
ಪ್ರವಾಸಿಗರಿಗೆ ಸೀಮಿತ ಪ್ರದೇಶ: ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಜಲಪಾತ ವೀಕ್ಷಣೆಯ ಪ್ರದೇಶ ಕಿರಿದಾಗಿದೆ. ಪ್ರವಾಸಿಗರಿಗೆ ಮೈಸೂರು ಬಂಗಲೆಯಿಂದ ಮಾತ್ರ ಜಲಪಾತವನ್ನು ನೋಡುವ ಅವಕಾಶ ಪ್ರಾಧಿಕಾರ ಮಾಡಿಕೊಟ್ಟಿದೆ.ತಳಕ್ಕಿಳಿಯುವ ಕಾಲುದಾರಿ ಹಲವು ವರ್ಷಗಳಿಂದ ಬಂದಾಗಿದ್ದು ಜಲಪಾತದ ಕೆಳಗಿನ ದೃಶ್ಯ ವೈಭವವನ್ನು ಕಾಣ ಬಯಸುವ ಯುವ ಪ್ರವಾಸಿಗರಿಗೆ ನಿರಾಸೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಜಲಪಾತ ದುಮುಕುವ ಪ್ರದೇಶಕ್ಕೆ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಬಿಡುತ್ತಿಲ್ಲ. ಇದರಿಂದ ರಾಜ ದಾರೆಯ ಮೇಲ್ಭಾಗದ ಕಲ್ಲು ಬಂಡೆಯ ಮೇಲೆ ಸಾಹಸ ಮೆರೆಯುತ್ತಿದ್ದ ಯುವ ಜನರಿಗೆ ಪ್ರವಾಸದ ಥ್ರಿಲ್ ಸಿಗುತ್ತಿಲ್ಲ. ಜಲಪಾತದ ಸುತ್ತಮುತ್ತ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು, ಸುರಕ್ಷತೆಯ ಹೆಸರಿನಲ್ಲಿ ನಿಲುಗಡೆಯಾಗಿರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲೆಂದರಲ್ಲಿ ನಿಲ್ಲಿಸಿ, ಸಂಚಾರಕ್ಕೆ ಅಡಚಣೆಮಾಡುವ ನೂರಾರು ವಾಹನಗಳನ್ನು ಸರಿಯಾದ ರೀತಿಯಲ್ಲಿ ಪಾರ್ಕಿಂಗ್ ಮಾಡಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಗಿದೆ.
ಈ ಬಾರಿ ಮುಂಗಾರು ಒಂದು ತಿಂಗಳು ತಡವಾಗಿ ಆರಂಭವಾಗಿ, ಕೇವಲ ಏಳೆಂಟು ದಿನ ಬಾರಿ ಪ್ರಮಾಣದಲ್ಲಿ ಮಳೆ ಸುರಿದು ಮತ್ತೆ ಕಡಿಮೆಯಾಗಿರುವುದರಿಂದ ಪ್ರವಾಸಿಗರನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ರೈನ್ ಕೋಟ್, ಟೊಪ್ಪಿ, ಛತ್ರಿ, ಸುಟ್ಟ ಜೋಳ, ಮಸಾಲೆ, ಮಂಡಕ್ಕಿ ವ್ಯಾಪಾರಸ್ಥರಿಗೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಗ್ಗಿ, ವಹಿವಾಟು ಕುಂಠಿತವಾಗುವ ಆತಂಕ ಎದುರಿಸುತ್ತಿದ್ದಾರೆ.
-------------------ಪೊಟೋ: 12ಟಿಜಿಪಿ02