ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಗ್ರಾಮೀಣ ಭಾಗದ ಅನೇಕ ಕಲೆಗಳಿಗೆ ಸೂಕ್ತ ವೇದಿಕೆ, ಪ್ರೋತ್ಸಾಹವಿಲ್ಲದೇ ನಶಿಸುವ ಹಂತ ತಲುಪಿದ್ದು, ಸಂಘ ಸಂಸ್ಥೆಗಳ ಮೂಲಕ ಅಂತಹ ಕಲಾವಿದರಿಗೆ ವೇದಿಕೆ ನೀಡಿ ಪ್ರೋತ್ಸಾಹಿಸಬೇಕು ಎಂದು ರಂಗ ಕಲಾವಿದ ಡಿ.ಲಕ್ಷ್ಮೀನಾರಾಯಣ್ ಹೇಳಿದರು.ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಚ್ಚೇಗೌಡರ ಸಭಾ ಭವನದಲ್ಲಿ ಜೇನುಗೂಡು ರೂರಲ್ ಡೆವಲ್ಪಮೆಂಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ವೆಂಕಟೇಶ್ ಮಾತನಾಡಿ, ಆಧುನಿಕತೆಯ ದೃಶಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಅವಕೃಪೆಯಿಂದ ಯುವ ಸಮುದಾಯ ಕಲೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಗ್ರಾಮೀಣ ಭಾಗದಲ್ಲಿ ಕಲೆಗೆ ಸಿಗಬೇಕಾದ ಮನ್ನಣೆ ಯುವ ಸಮುದಾಯದಿಂದ ಸಿಗುವಂತಾಗಬೇಕು ಎಂದರು.ಗ್ರಾಮೀಣ ಕಲೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಬೇಕು, ಸಂಘ ಸಂಸ್ಥೆಗಳು ಸಹ ಕಲೆಯನ್ನು ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಚೌಡೇಗೌಡ ಮಾತನಾಡಿ, ನಮ್ಮ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೇ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಶಿಬಿರಗಳು, ರಕ್ತದಾನ ಶಿಬಿರಗಳು ಹಾಗೂ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿದೆ ಎಂದು ಹೇಳಿದರು.
ಕಾನೂನು ಸೇಚಾ ಪ್ರಾಧಿಕಾರದ ಸದಸ್ಯರಾದ ಎಂ.ಪ್ರಶಾಂತ್ ಮಾತನಾಡಿ, ಕಲೆಯನ್ನೇ ನಂಬಿಕೊಂಡಿರುವ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರಿಯಾದ ಪ್ರೋತ್ಸಾಹ, ಸಹಕಾರ ಸಿಗದೆ ಯುವ ಪೀಳಿಗೆ ಕಲಾಕ್ಷೇತ್ರದತ್ತ ಚಿತ್ತ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜೇನುಗೂಡು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್ ಮಾತನಾಡಿ, ಹಿರಿಯರು ಮತ್ತು ಕಿರಿಯರು ಜೊತೆಗೂಡಿ ಗ್ರಾಮೀಣ ಕಲಾಪ್ರಕಾರಗಳಿಗೆ ಆಧುನಿಕ ಸ್ಪರ್ಶ ನೀಡುವ ಮೂಲಕ ಮರುಜೀವ ನೀಡಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಹೇಳಿದರು.ನಿಶಾ ಮತ್ತು ತಂಡದಿಂದ ಭರತನಾಟ್ಯ, ಸಮರ್ಥ ಮತ್ತು ತಂಡದಿಂದ ಜಾನಪದ ನೃತ್ಯ, ಅರುಣ್ ಕುಮಾರ್ ತಂಡದಿಂದ ಜಾನಪದ ಗೀತೆ, ಮುನಿಕೃಷ್ಣ ತಂಡದಿಂದ ಸುಗಮ ಸಂಗೀತ, ತನುಶ್ರೀ ತಂಡದಿಂದ ಭರತನಾಟ್ಯ, ಚಿನ್ಮಿತ ತಂಡದಿಂದ ಸಮೂಹ ನೃತ್ಯ, ಸಂತೋಷ ತಂಡದಿಂದ ಜನಪದ ಗೀತೆ, ಸ್ಟುಡಿಯೋ ಆನಂದ್ ತಂಡದಿಂದ ರಂಗಗೀತೆಗಳ ಕಾರ್ಯಕ್ರಮ ನಡೆಯಿತು.
ಕಲಾ ಪ್ರದರ್ಶನ ನೀಡಿದ ಕಲಾವಿದರಿಗೆ ಜೇನುಗೂಡು ಟ್ರಸ್ಟ್ ವತಿಯಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.ರಂಗ ಕಲಾವಿದ ಡಿ.ಲಕ್ಷ್ಮೀನಾರಾಯಣ, ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್, ನಿರ್ದೇಶಕ ಸೈಯದ್ ಮೆಹಬೂಬ್, ತರಬಹಳ್ಳಿ ಹರೀಶ್, ಅತ್ತಿಬೆಲೆ ಮಂಜುನಾಥ್, ನಯಾಜ್ ಖಾನ್, ಜಿಯಾವುಲ್ಲಾ, ಕಲಾವಿದೆ ತನುಶ್ರೀ, ವಸತಿ ಶಾಲೆಯ ಶಿಕ್ಷಕರಾದ ರುತ್ ಜೆಸೆಂತಾ, ರಕ್ಷಿತಾ, ಗಂಗಾಧರ್ ಇತರರು ಇದ್ದರು.