ವರ್ಷದ ಬಳಿಕ ಬೆಳಕಿಗೆ ಬಂದ ಅಪ್ರಾಪ್ತ ಬಾಲಕಿ ಸಾವಿನ ಪ್ರಕರಣ ಅತ್ಯಂತ ದುಃಖಕರ ಹಾಗೂ ಖಂಡನೀಯವಾಗಿದ್ದು, ಕೂಡಲೇ ಎಸ್‌ಐಟಿ ತನಿಖೆ ಮೂಲಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ, ಶಿವಮೊಗ್ಗ
ವರ್ಷದ ಬಳಿಕ ಬೆಳಕಿಗೆ ಬಂದ ಅಪ್ರಾಪ್ತ ಬಾಲಕಿ ಸಾವಿನ ಪ್ರಕರಣ ಅತ್ಯಂತ ದುಃಖಕರ ಹಾಗೂ ಖಂಡನೀಯವಾಗಿದ್ದು, ಕೂಡಲೇ ಎಸ್‌ಐಟಿ ತನಿಖೆ ಮೂಲಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ತಾಲೂಕಿನ ತರಲಘಟ್ಟ ಗ್ರಾಮದ ಸಂಗೀತಾ ಮನೆಗೆ ಭಾನುವಾರ ಭೇಟಿ ನೀಡಿ ದುಃಖತಪ್ತ ತಂದೆ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ ಅವರು, ದುರ್ಘಟನೆ ಸಂಭವಿಸಿ ವರ್ಷದ ಬಳಿಕ ತಡವಾಗಿ ನಾಪತ್ತೆ ಪ್ರಕರಣ ದಾಖಲಾಗಿರುವುದು ದುಃಖಕರ, ಅಮಾನವೀಯ ಹಾಗೂ ತೀವ್ರ ಖಂಡನೀಯ ಸಂಗತಿಯಾಗಿದೆ ಎಂದು ತಿಳಿಸಿದರು.
ಮಗಳ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿರುವ ನಿರಪರಾಧಿ ಕುಟುಂಬದ ಆಕ್ರಂದನ ಮನಕಲಕುವಂತಿದ್ದು, ಈ ಕಠಿಣ ಸಮಯದಲ್ಲಿ ನಿಮ್ಮ ಜೊತೆಗಿರುವುದಾಗಿ ಧೈರ್ಯ ಹೇಳಿದರು.ಈ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣದ ಸತ್ಯಾಸತ್ಯತೆ ಸಂಪೂರ್ಣವಾಗಿ ಹೊರಬರಬೇಕಾದರೆ ಮತ್ತು ಈ ವಿಳಂಬಕ್ಕೆ ಕಾರಣವಾದ ಅಂಶಗಳು ಬಯಲಾಗಬೇಕಾದರೆ, ತಕ್ಷಣವೇ ವಿಶೇಷ ತನಿಖಾ ತಂಡ (SIT) ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆಗ್ರಹಿಸಿ ಪ್ರಕರಣದ ಆರೋಪಿಗಳು ಈಗಾಗಲೇ ಬಂಧನಕ್ಕೊಳಗಾಗಿದ್ದು, ಯಾವುದೇ ಕಾರಣಕ್ಕೂ ರಾಜಕೀಯ ಪ್ರಭಾವಕ್ಕೆ ಮಣಿಯದೆ ತಪ್ಪಿತಸ್ಥರಿಗೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆಯಾಗಬೇಕು. ಶೋಷಿತ ಕುಟುಂಬಕ್ಕೆ ಶೀಘ್ರವಾಗಿ ಸೂಕ್ತ ನ್ಯಾಯ ಮತ್ತು ಭದ್ರತೆ ದೊರೆವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು .
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಕೆ.ಎಸ್. ಗುರುಮೂರ್ತಿ, ತಾ. ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ ಹಾಗೂ ಬಣಜಾರ್ ಸಮಾಜದ ಮುಖಂಡರಾದ ರಾಮನಾಯ್ಕ್, ಬಂಗಾರಿ ನಾಯ್ಕ್, ರಮೇಶ್ ನಾಯ್ಕ್, ಸುರೇಶ್ ನಾಯ್ಕ್, ವಿಜಯಲಕ್ಷ್ಮಿ ಸೇರಿ ಬಣಜಾರ್ ಸಮಾಜದ ಹಲವಾರು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.- - -
-12ಎಸ್‌ಕೆಪಿ01:ಸಂಸದ ಬಿ.ವೈ.ರಾಘವೇಂದ್ರ ತರಲಘಟ್ಟ ಗ್ರಾಮದ ಸಂಗೀತಾ ಮನೆಗೆ ಭಾನುವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.