ಹಾವೇರಿ: ಗ್ರಾಪಂ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟದ ಉಪಾಧ್ಯಕ್ಷ ಶಿವಲಿಂಗಪ್ಪ ತಲ್ಲೂರ ಎಚ್ಚರಿಕೆ ನೀಡಿದರು.
ಆರ್‌ಡಿಪಿಆರ್ ವೃಂದದವರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸದರೂ ಮನ್ನಣೆ ನೀಡದೇ ಇರುವುದರಿಂದ ಬೆಂಗಳೂರು ಚಲೋ ಮಾಡಿ ಎರಡು ದಿನ ಹೋರಾಟ ಮಾಡಲಾಗಿತ್ತು. ಈಗ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹೋರಾಟ ಮಾಡಲಾಗುತ್ತದೆ. ಗ್ರಾಮೀಣಾಭಿವೃದ್ಧಿಗಾಗಿ ಸ್ಥಳೀಯ ಸರ್ಕಾರ ಜನಪ್ರತಿನಿಧಿಗಳು ಹಾಗೂ ಕಾರ್ಯವೃಂದದವರು ಒಂದಾಗಿದ್ದೇವೆ. ನಮ್ಮ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡಿ ಬೇಡಿಕೆ ಈಡೇರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪರಿಷತ್ ಸದಸ್ಯ ಸತೀಶ ಮುರಡೇರ ಮಾತನಾಡಿ, ಸರ್ಕಾರ ಪಿಡಿಒಗಳ ಹುದ್ದೆಯನ್ನು ಗೆಜೆಟೆಡ್ ಬಿ ದರ್ಜೆಗೆ ಏರಿಸಬೇಕು. ಜ್ಯೇಷ್ಠತಾ ಪಟ್ಟಿ ತಯಾರಿಸಿ ಬಡ್ತಿ ನೀಡುವಂತಾಗಬೇಕು. ವೃಂದ ಮತ್ತು ನೇಮಕಾತಿ ನೌಕರಸ್ನೇಹಿ ತಿದ್ದುಪಡಿ ತರಬೇಕು. ಅಭಿವೃದ್ಧಿ ಕಡೆಗೆ ಗಮನ ನೀಡಲು ಒತ್ತಡರಹಿತ ಕೆಲಸಕ್ಕೆ ಮಾರ್ಗಸೂಚಿ ಮಾಡಬೇಕು ಎಂದರು.ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಶಿವನಗೌಡ ತಿರಕನಗೌಡ್ರ ಮಾತನಾಡಿ, ಗ್ರಾಪಂನಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವವರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಶೀಘ್ರವಾಗಿ ಸ್ಪಂದಿಸುವಂತೆ ನಾವೆಲ್ಲರೂ ಒಂದಾಗಿದ್ದೇವೆ. ಸಿಪಾಯಿ, ನೀರಗಂಟಿ, ಸ್ವಚ್ಛತಾಗಾರ ಹಾಗೂ ಗ್ರಾಪಂನಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಮಾನ ವೇತನ, ಸೇವಾ ಭದ್ರತೆ, ಪಿಂಚಣಿ ಸಿಗಬೇಕಿದೆ ಎಂದರು.