ಶಿರಹಟ್ಟಿ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಪಂ ಆಡಳಿತ ಮಂಡಳಿಯವರ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿಯವರೆಗೂ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿಲ್ಲ. ಇದೇ ರೀತಿ ವಿಳಂಬ ನೀತಿ ಅನುಸರಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ ಅಭಿಮಾನಿಗಳ ಸಂಘ ಎಚ್ಚರಿಸಿದೆ.
೨೦೧೫ರಲ್ಲಿಯೇ ಫಲಾನುಭವಿಗಳ ಆಯ್ಕೆ ಕೂಡ ಮಾಡಲಾಗಿದೆ. ಅರ್ಹ ಫಲಾನುಭವಿಗಳಿಗೆ ನಿವೇಶನ ದೊರೆಯದೇ ಇರುವುದರಿಂದ ಅನೇಕರಿಂದ ದೂರುಗಳು ಬಂದಿರುವ ಹಿನ್ನೆಲೆ ಫಲಾನುಭವಿಗಳ ಆಯ್ಕೆಪಟ್ಟಿ ಒಮ್ಮೆ ರದ್ದುಪಡಿಸಲಾಯಿತು. ಮತ್ತೊಮ್ಮೆ ಆಯ್ಕೆ ಮಾಡಿ ಪಂಚಾಯಿತಿ ಕಾರ್ಯಾಲಯದೆದುರು ಅಂಟಿಸಲಾಗಿತ್ತು. ನಂತರ ಬಂದ ಅಧಿಕಾರಿಗಳು ಯಾವ ಕಾರಣಕ್ಕೆ ವಿಳಂಬ ಮಾಡಿದರೂ ಎಂಬುದು ಇವತ್ತಿನ ವರೆಗೂ ತಿಳಿಯದಾಗಿದೆ ಎಂದರು.ಅಧಿಕಾರಿಗಳ ಮತ್ತು ಅಂದಿನಿಂದ ಇಲ್ಲಿಯವರೆಗೂ ಇದ್ದ ಪಪಂ ಆಡಳಿತ ಮಂಡಳಿಯವರ ನಿರ್ಲಕ್ಷ್ಯತನದಿಂದ ಬಡವರ ನಿವೇಶನದ ಕನಸು ಕನಸಾಗಿಯೇ ಉಳಿದಿದೆ. ಮತ್ತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಗಡುವು ನೀಡಿದ್ದು, ಈ ಬಾರಿ ಮಾತ್ರ ಮತದಾರರು ರಾಜಕಾರಣಿಗಳಿಗೆ ಪಾಠ ಕಲಿಸಲಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಂಡು ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.ಜನವರಿಯೊಳಗಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಜಿಲ್ಲಾ ಸಂಘಟನೆಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಪಪಂ ಕಾರ್ಯಾಲಯಕ್ಕೆ ಬೀಗ ಜಡಿದು, ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಕಂಬಳಿ, ರವಿ ಘಂಟಿ, ಆನಂದ ಸ್ವಾಮಿ, ಬಸವರಾಜ ಪರಿಯವರ, ಸೋಮು ರೂಗಿ, ಜಗದೀಶ ಇಟ್ಟೆಕಾರ ಮುಂತಾದವರು ಇದ್ದರು.