ಗದಗ: ತಾಲೂಕಿನ ಮಲಪ್ರಭಾ ಕಾಲುವೆ ಹೊಂದಿರುವ ನೀರಾವರಿ ಜಮೀನುಗಳಿಗೆ ಮಾ. 15ರ ವರೆಗೆ ಜಲಾಶಯದಿಂದ ಕಾಲುವೆಗೆ ನೀರು ಪೂರೈಕೆ ಮಾಡದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದೆಂದು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ತಿಳಿಸಿದರು.
ಹಿಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರು ಗೋವಿನಜೋಳ, ಈರುಳ್ಳಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಈ ಬೆಳೆಗಳಿಗೆ ಮುಂದಿನ ದಿನ ಇನ್ನು ಎರಡು ನೀರನ್ನು ಬೆಳೆಗಳಿಗೆ ಕೊಟ್ಟರೆ ಮಾತ್ರ ಈ ಬೆಳೆಗಳು ರೈತನ ಕೈಗೆ ಮುಟ್ಟುತ್ತವೆ. ಆದ್ದರಿಂದ ಸರ್ಕಾರ ಮಲಪ್ರಭಾ ಜಲಾಶಯ ಮಹಾಮಂಡಳಿಯವರು ಮತ್ತು ಅಧಿಕಾರಿಗಳು ಮಾ. 15ರ ವರೆಗೆ ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಪೂರೈಕೆ ಮಾಡಲು ಆದೇಶಿಸದಿದ್ದರೆ ತಾಲೂಕಿನ ರೈತರು ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದರು.
ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್. ಅವರು ರೈತರ ಮನವಿ ಸ್ವೀಕರಿಸಿದರು. ರೈತ ಮುಖಂಡರಾದ ಶೇಖರಗೌಡ ಪೊಲೀಸಪಾಟೀಲ, ಹನುಮಂತ ಅಣ್ಣಿಗೇರಿ, ಅನೀಲ ಕಳಸಣ್ಣವರ, ಕೃಷ್ಣಪ್ಪ ಚವಾಣ, ಇಸ್ಮಾಯಿಲ್ ಮುದಕವಿ, ಶೇಕತಲಿ ಸನ್ನಿ, ಸೇರಿದಂತೆ ಮುಂತಾದವರು ಇದ್ದರು.