ಸಂಜೀವಕುಮಾರ ಹಿರೇಮಠಹೊಳೆಆಲೂರು: ರಕ್ತದಾನದಿಂದ ಹಲವು ಜೀವಗಳನ್ನು ಉಳಿಸಬಹುದು ಎಂದು ಪ್ರಚಾರ ಮಾಡುತ್ತಿದ್ದರೂ ಅವಶ್ಯಕತೆ ಇರುವಷ್ಟು ರಕ್ತ ಸಂಗ್ರಹವಾಗುತ್ತಿಲ್ಲ. ಇದರ ಮಧ್ಯೆ 50 ವರ್ಷ ದಾಟಿದ ವ್ಯಕ್ತಿಯೊಬ್ಬರು ಬರೋಬ್ಬರಿ 105 ಬಾರಿ ರಕ್ತದಾನ ಮಾಡಿ ಮಾದರಿ ಆಗಿದ್ದಾರೆ.
ಸಮೀಪದ ಬಿ.ಎಸ್. ಬೇಲೇರಿ ಗ್ರಾಮದಲ್ಲಿ ನಡೆದ ಸುಖಮುನೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ರಕ್ತದಾನ ಶಿಬಿರದಲ್ಲಿ 105ನೇ ಬಾರಿ ರಕ್ತದಾನ ಮಾಡಿದರು. ಅಲ್ಲದೇ ರಕ್ತದ ಹನಿಯ ಗುರುತು ಇರುವ ಅಂಗಿ, ಪ್ಯಾಂಟ್ ಧರಿಸಿ ರಕ್ತದಾನದ ಮಹತ್ವ ಸಾರಿದರು.
ಇವರು ಸತತ 25 ವರ್ಷಗಳಿಂದ ರಕ್ತದಾನ ಮಾಡುತ್ತಿದ್ದು, ಇವರ ಪ್ರೇರಣೆಯಿಂದ ಜಾತ್ರೆಯಲ್ಲಿ 50 ಜನ ರಕ್ತದಾನ ಮಾಡಿರುವುದು ಗಮನಾರ್ಹ. ದೇವಸ್ಥಾನದ ಮೈಕ್ ಹಿಡಿದು, ರಕ್ತದಾನ ಮಾಡಿ ಜೀವ ಉಳಿಸಿ ಎಂಬ ನಾಮ ಫಲಕ ಹಿಡಿದು ಪ್ರಚಾರ ಮಾಡಿದ್ದಾರೆ.ಪ್ರೇರಣೆ ಏನು?: ಕೆಲ ವರ್ಷಗಳ ಹಿಂದೆ ಇವರ ಸಹೋದರಿ ಶೋಭಾ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿದ್ದಾಗ 8 ಬಾಟಲಿ ರಕ್ತದ ಅವಶ್ಯಕತೆ ಇತ್ತು. ಇವರ ಅಣ್ಣ ಹಾಗೂ ತಮ್ಮ 2 ಬಾಟಲಿ ರಕ್ತ ಕೊಟ್ಟಿದ್ದರು. 6 ಬಾಟಲಿ ರಕ್ತಕ್ಕಾಗಿ ಅಲೆದಾಡಿದರೂ ಸಹೋದರಿಯ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಆ ಕಾರಣಕ್ಕಾಗಿಯೇ ನಾಡಿನುದ್ದಕ್ಕೂ ರಕ್ತದಾನದ ಮಹತ್ವ ಸಾರುತ್ತಿದ್ದಾರಂತೆ. 7ನೇ ತರಗತಿ ಓದಿರುವ ಶಿವಕುಮಾರ ದೇಹದಾನ ಹಾಗೂ ನೇತ್ರದಾನದ ವಾಗ್ದಾನ ಮಾಡಿದ್ದಾರೆ.
ಜೀವ ಉಳಿಸಿ: ನಮ್ಮ ದೇಶದಲ್ಲಿ ರಕ್ತ ಸಿಗದೇ ಹಲವಾರು ಸಾವಿಗೀಡಾಗುತ್ತಿದ್ದಾರೆ. ಅದನ್ನು ತಪ್ಪಿಸಲು ರಕ್ತದಾನಕ್ಕೆ ಕೈಜೋಡಿಸಬೇಕು. ಪ್ರತಿಯೊಬ್ಬರೂ ರಕ್ತದಾನ ಮಾಡಿದಾಗ ಹಲವರ ಜೀವ ಉಳಿಸಿದಂತಾಗುತ್ತದೆ. ರಕ್ತದಾನ ಮಾಡಿ ಜೀವ ಉಳಿಸಿ ಎಂದು ಶಿವಕುಮಾರ ಮಹಡಿಮನೆ ಮನವಿ ಮಾಡಿದರು.