೪೬ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನ: ಪ್ರೊ.ನಿರಂಜನ್ ವಾನಳ್ಳಿ । ೩ ಸಾಧಕರಿಗೆ ಡಾಕ್ಟರೇಟ್ ಗೌರವ
ಕನ್ನಡಪ್ರಭ ವಾರ್ತೆ ಕೋಲಾರಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವವು ಆ.೧ರಂದು ಬೆಳಗ್ಗೆ ೧೧ ಗಂಟೆಗೆ ಕೋಲಾರದ ನಂದಿನಿ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ೪೬ ಮಂದಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ನಿರಂಜನ ತಿಳಿಸಿದರು.
ನಗರದ ಹೊರವಲಯದ ಟಮಕಾದ ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಉತ್ತರ ವಿವಿ ೫ನೇ ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಲಿದ್ದು, ಸಮಕುಲಾಧಿಪತಿಗಳೂ ಆದ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಗೌರವ ಕಾರ್ಯದರ್ಶಿ ಡಾ. ವೂಡೆ.ಪಿ.ಕೃಷ್ಣ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿದ್ದು, ಡಾ.ಎಚ್.ಎಸ್.ಶೆಟ್ಟಿ ಸಮಾಜ ಸೇವೆಯಲ್ಲಿ, ಸಂಗೀತ, ರಂಗಭೂಮಿ ಕ್ಷೇತ್ರದಿಂದ ಪಿಚ್ಚಳ್ಳಿ ಶ್ರೀನಿವಾಸ್, ಉದ್ಯಮಶೀಲತೆ ವಿಭಾಗದಿಂದ ಬೆಂಗಳೂರಿನ ಪ್ರತಿಷ್ಠಿತ ಬ್ರಾಹ್ಮಿನ್ಸ್ ಕಾಫಿ ಬಾರ್‌ನ ಮಾಲೀಕ ರಾಧಾಕೃಷ್ಣ ಅಡಿಗ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಅವ್ಯವಹಾರ ನಡೆದಿದ್ದರೆ ನೇಣಿಗೆ ಹಾಕಲಿ:ಪತ್ರಕರ್ತರು ವಿವಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದಾಗ ಅದನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಕುಲಪತಿ ಪ್ರೊ.ನಿರಂಜನವಾನಳ್ಳಿ, ನನ್ನ ಅವಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಅಂತಹ ದೂರು ರಾಜ್ಯಪಾಲರಿಗೂ ಹೋಗಿದೆ, ತನಿಖೆ ನಡೆಸಲಿ, ನಾನಿನ್ನೂ ೪ ತಿಂಗಳು ವಿವಿಯ ಕುಲಪತಿಯಾಗಿ ಇರುತ್ತೇನೆ. ಅಂತಹ ಯಾವುದೇ ಅವ್ಯವಹಾರ ನಡೆದಿರುವುದು ಸಾಬೀತು ಮಾಡಿದರೆ ನನ್ನನ್ನು ಇಲ್ಲೇ ನೇಣಿಗೆ ಹಾಕಲಿ ಎಂದು ಖಾರವಾಗಿ ಉತ್ತರಿಸಿದರು.
೪೬ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನ:ವಿವಿಧ ಪದವಿಗಳಲ್ಲಿ ಮೊದಲ ರ್‍ಯಾಂಕ್ ಗಳಿಸಿದ ೪೬ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು, ಚಿನ್ನದ ಪದಕಗಳು ಸ್ನಾತಕ ವಿಭಾಗದಲ್ಲಿ ೨೬ ಪದಕ, ಯುಜಿ ಪದವಿಯಲ್ಲಿ ೧೮ ಚಿನ್ನದಪದಕ, ಬ್ಯಾಚುಲರ್ ಆಫ್ ಎಜುಕೇಷನ್‌ನಲ್ಲಿ ೧, ಬ್ಯಾಚುಲರ್ ಆಫ್ ಫಿಸಿಕಲ್ ವಿಭಾಗದಲ್ಲಿ ಒಂದು ಚಿನ್ನದ ಪದಕ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಚಿನ್ನದ ಪದಕಗಳಲ್ಲಿ ಒಂದನ್ನು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ವೇಣುಗೋಪಾಲ್, ಸಿಂಡಿಕೇಟ್ ಸದಸ್ಯ ರವೀಶ್ ೫ ಪದಕ, ಆಕ್ಸ್ ಫರ್ಡ್ ಚೇರ್‍ಮನ್ ೧ ಪದಕ ಪ್ರಾಯೋಜನೆ ನೀಡಿದ್ದು, ಉಳಿದವುಗಳನ್ನು ವಿವಿಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.ಪರೀಕ್ಷಾಂಗ ಕುಲಸಚಿವ ಲೋಕನಾಥ್ ಮಾತನಾಡಿ, ಕುಲಾಧಿಪತಿಗಳು ಬಂಗಾರದ ಪದಕ ವಿತರಿಸಲಿದ್ದು, ಈ ವರ್ಷ ಒಟ್ಟು ೨೩,೧೨೬ ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ. ಸ್ನಾತಕ- ೧೨,೫೫೦, ಸ್ನಾತಕೋತ್ತರ-೪,೦೦೨, ಬಿ.ಇಡಿ, ಬಿ.ಪಿ.ಇಡಿ -೨,೫೦೫, ಸ್ವಾಯತ್ತ ಕಾಲೇಜು-೪,೦೬೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ವಿವರಿಸಿದರು.