ಕನ್ನಡಪ್ರಭ ವಾರ್ತೆ ಬೆಂಗಳೂರು
ಲಕ್ಕಸಂದ್ರ ನಿವಾಸಿ ಕಾವೇರಿಯಮ್ಮ ಎಂಬುವರು ಎರಡು ದಶಕಗಳ ಹಿಂದೆ ನಿವೇಶನಕ್ಕಾಗಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. 2002ರ ಫೆಬ್ರವರಿಯಲ್ಲಿ ಬನಶಂಕರಿ 6ನೇ ಹಂತದ 2ನೇ ಬ್ಲಾಕ್‌ನಲ್ಲಿ 30/40 ಅಳತೆಯ ನಿವೇಶನವನ್ನು ಬಿಡಿಎ ಮಂಜೂರು ಮಾಡಿ 2003ರಲ್ಲಿ ಸ್ವಾಧೀನ ಪತ್ರ ನೀಡಿತ್ತು. ಕಾವೇರಿಯಮ್ಮ ಅವರು ತಮ್ಮ ಹೆಸರಿಗೆ ಖಾತಾ ಮಾಡಿಸಿಕೊಂಡಿದ್ದರು.
ನಿವೃತ್ತಿ ನಂತರ ಮನೆ ಕಟ್ಟಿಸಿಕೊಳ್ಳುವ ಆಲೋಚನೆಯಲ್ಲಿದ್ದ ಅವರು, 2019ರ ಫೆಬ್ರವರಿ ತಿಂಗಳಲ್ಲಿ ತಮ್ಮ ನಿವೇಶನದ ಬಳಿ ಹೋದಾಗ ನಿವೇಶನ ಜಾಗದಲ್ಲಿ ಅರಣ್ಯ ಇಲಾಖೆ ಕಾಂಪೌಂಡ್ ಹಾಕಿತ್ತು. ಈ ಕುರಿತು ವಿಚಾರಿಸಿದಾಗ, ಅದು ಅರಣ್ಯ ಇಲಾಖೆಯ ಒತ್ತುವರಿ ಜಾಗ ಎಂದು ಗೊತ್ತಾಗಿದೆ. ಹೀಗಾಗಿ, ಬದಲಿ ನಿವೇಶನ ನೀಡುವಂತೆ ಕಾವೇರಿಯಮ್ಮ ಬಿಡಿಎಗೆ ಮನವಿ ಪತ್ರ ನೀಡಿದ್ದರು.ಮಂಜೂರಾದ 2 ವರ್ಷಗಳಲ್ಲಿ ಮನೆ ಕಟ್ಟಿಸಿಕೊಳ್ಳದ ಕಾರಣ ಅರಣ್ಯ ಇಲಾಖೆ ತನ್ನ ಜಾಗದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರದಿಂದ ಮುಂದಿನ ಕ್ರಮಕ್ಕಾಗಿ ಕಾಯುತ್ತಿದ್ದೇವೆ ಎಂದು ಬಿಡಿಎ ಅಧಿಕಾರಿಗಳು ಉತ್ತರಿಸಿದ್ದಾರೆ. ಈ ಉತ್ತರದಿಂದ ತೃಪ್ತರಾಗದ ಕಾವೇರಿಯಮ್ಮ, ಬಿಡಿಎ ಆಯುಕ್ತರ ವಿರುದ್ಧ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಅರ್ಜಿದಾರರಾದ ಕಾವೇರಿಯಮ್ಮನವರಿಗೆ ಮೂರು ತಿಂಗಳ ಒಳಗಾಗಿ ಅದೇ ಲೇಔಟ್‌ನಲ್ಲಿ ಅಥವಾ ಬೇರೆ ಲೇಔಟ್‌ನಲ್ಲಿ ಬದಲಿ ಬಿಡಿಎ ನಿವೇಶನ ಮಂಜೂರು ಮಾಡಬೇಕು. ಸೇವೆಯಲ್ಲಿನ ನ್ಯೂನತೆಗಾಗಿ ₹50 ಸಾವಿರ ಹಾಗೂ ಕಾನೂನು ಹೋರಾಟದ ಶುಲ್ಕವಾಗಿ ₹5 ಸಾವಿರ ಪರಿಹಾರ ನೀಡುವಂತೆ ಬೆಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ತನ್ನ ಆದೇಶದಲ್ಲಿ ತಿಳಿಸಿದೆ.