ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ರಥಕ್ಕೆ ಬಾಳೆಹಣ್ಣು ಎಸೆಯುವಂತಿಲ್ಲ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ರಥಕ್ಕೆ ಉತ್ತತ್ತಿ ಎಸೆಯುವುದು ಸಂಪ್ರದಾಯ. ಆದರೆ, ಇತ್ತೀಚೆಗೆ ಬಾಳೆಹಣ್ಣು ಎಸೆಯುತ್ತಿರುವುದರಿಂದ ರಥ ಸಾಗುವ ಮೈದಾನದಲ್ಲಿ ವಿಪರೀತ ಗಲೀಜು ಆಗುತ್ತಿದೆ. ಬಾಳೆಹಣ್ಣಿನ ಮೇಲೆ ಕಾಲಿಟ್ಟು, ಮಕ್ಕಳು, ವೃದ್ಧರು ಜಾರಿ ಬೀಳುತ್ತಿದ್ದಾರೆ.

ಕೊಪ್ಪಳ: ಜಾತ್ರಾ ಮಹೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಒಂದಿಲ್ಲೊಂದು ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಪರಿಸರಸ್ನೇಹಿ ಕ್ರಮ ಕೈಗೊಳ್ಳುವ ಮೂಲಕ ಗವಿಮಠ ಸಮೂಹ ಸನ್ನಿಯನ್ನೇ ಬದಲಿಸುತ್ತಿದೆ. ಈ ವರ್ಷ ರಥೋತ್ಸವದಲ್ಲಿ ಬಾಳೆಹಣ್ಣು ಎಸೆಯದಂತೆ, ಪೀಪಿ, ಪುಂಗಿ ಮಾರಾಟ; ಊದುವುದನ್ನು ಮಾಡುವಂತಿಲ್ಲ ಎನ್ನುವ ಜಾಗೃತಿ ಆರಂಭಿಸಿದೆ.

ರಥಕ್ಕೆ ಉತ್ತತ್ತಿ ಎಸೆಯುವುದು ಸಂಪ್ರದಾಯ. ಆದರೆ, ಇತ್ತೀಚೆಗೆ ಬಾಳೆಹಣ್ಣು ಎಸೆಯುತ್ತಿರುವುದರಿಂದ ರಥ ಸಾಗುವ ಮೈದಾನದಲ್ಲಿ ವಿಪರೀತ ಗಲೀಜು ಆಗುತ್ತಿದೆ. ಬಾಳೆಹಣ್ಣಿನ ಮೇಲೆ ಕಾಲಿಟ್ಟು, ಮಕ್ಕಳು, ವೃದ್ಧರು ಜಾರಿ ಬೀಳುತ್ತಿದ್ದಾರೆ. ಅಷ್ಟಕ್ಕೂ ಹೀಗೆ ಎಸೆದ ಬಾಳೆಹಣ್ಣು ನೆಲದ ಪಾಲಾಗುವುದೇ ಅಧಿಕ. ಇದನ್ನು ತಪ್ಪಿಸಲು ಬಾಳೆಹಣ್ಣು ಎಸೆಯದಂತೆ ಗವಿಸಿದ್ದೇಶ್ವರ ಶ್ರೀ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಮಾರಾಟವೂ ನಿಷೇಧ: ರಥೋತ್ಸವ ವೇಳೆ ಬಾಣೆಹಣ್ಣು ಮಾರಾಟ ನಿಷೇಧಿಸಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದರಿಂದ ಬಾಳೆಹಣ್ಣು ಮಾರಾಟಗಾರರು ಆಗಮಿಸುವುದಿಲ್ಲ.ಸ್ವಯಂ ಉದ್ಯೋಗ, ವೃತ್ತಿ ಕೌಶಲ್ಯದ ಸಂಕಲ್ಪ ಜಾಗೃತಿ ಅಭಿಯಾನ, ಕಾಯಕ ದೇವೋಭವ ಎಂಬ ಜಾಗೃತಿ ಜಾಥಾ ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ ಬದುಕು ಎಂಬ ಘೋಷವಾಕ್ಯದೊಂದಿಗೆ ಜ. 24ರಂದು ಜಾಥಾವು ಕೊಪ್ಪಳದ ಬಾಲಕಿಯರ ಸರ್ಕಾರಿ ಕಾಲೇಜಿನ ಮೈದಾನದಿಂದ (ತಾಲೂಕು ಕ್ರೀಡಾಂಗಣ) ಚಾಲನೆಗೊಂಡು ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬ ಮೂಲಕ ಮಠದ ಜಾತ್ರಾ ಮಹಾದಾಸೋಹಕ್ಕೆ ತಲುಪಿ ಸಮಾರೋಪಗೊಳ್ಳಲಿದೆ.ಭಾಷಣ ಸ್ಪರ್ಧೆ ಏರ್ಪಡಿಸಿ, ಸ್ಥಳೀಯ ಮಟ್ಟದಲ್ಲಿ ಆಯ್ಕೆಯಾಗಿ ಪ್ರಥಮ ಸ್ಥಾನ ಪಡೆದ ಸರ್ಕಾರಿ/ಅನುದಾನಿತ/ಖಾಸಗಿ ಪ್ರೌಢಶಾಲೆ, ಪಿಯು, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜ. 13ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ.ವಿಜೇತರಾದ ವಿದ್ಯಾರ್ಥಿಗಳಿಗೆ ಜ. 24ರಂದು ಮಠದ ಮಹಾದಾಸೋಹ ಮಂಟಪದಲ್ಲಿ ನಡೆಯುವ ಜಾಗೃತಿ ಜಾಥಾ ನಡಿಗೆಯ ಸಮಾರೋಪದಲ್ಲಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9742307153, 9986591076ನ್ನು ಸಂಪರ್ಕಿಸಲು ಗವಿಮಠ ಪ್ರಕಟಣೆ ತಿಳಿಸಿದೆ.

Share this article