ಆರ್ಥಿಕ ಬಲವರ್ಧನೆಗೆ ಪುಣ್ಯಭೂಮಿ ಅಮೃತ್‌ ಕಂಪನಿ ಆರಂಭ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ, ಸ್ವಂತ ಬ್ರಾಂಡಿಂಗ್‌ನಡಿ ಮಾರಾಟ ಮಾಡಿ, ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ನೆರವು ಕಲ್ಪಿಸುತ್ತಿದೆ. ಈ ನಿಟ್ಟಿನಲ್ಲಿಯೇ ಪುಣ್ಯಭೂಮಿ ಅಮೃತ್ ರೈತ ಉತ್ಪಾದಕರ ಕಂಪನಿ ಆರಂಭಿಸಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ರೈತ ಸಮುದಾಯದ ಕೃಷಿ ಉತ್ವನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರಕಿಸಿ ರೈತರು ಸ್ವಂತ ಬ್ರಾಂಡಿಂಗ್ ನಡಿ ಮಾರಾಟ ಮಾಡಿ, ಆದಾಯ ಹೆಚ್ಚಿಸಲು ರೈತರ ಸಹಕಾರದಿಂದ ಪುಣ್ಯಭೂಮಿ ಅಮೃತ್ ರೈತ ಉತ್ಪಾದಕರ ಕಂಪನಿ ಆರಂಭಿಸಲಾಗಿದೆ. ಕೇಂದ್ರದ ಸಂಪೂರ್ಣ ಬೆಂಬಲ ಹೊಂದಿರುವ ಕಂಪನಿ ಮೂಲಕ ರೈತರು ವ್ಯವಹರಿಸಿ, ಸೂಕ್ತ ಮಾರುಕಟ್ಟೆ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗುವಂತೆ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ತಾಲೂಕಿನ ಅರಿಷಿಣಗೆರೆ ಗ್ರಾಮದಲ್ಲಿ ಶನಿವಾರ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪುಣ್ಯಭೂಮಿ ಅಮೃತ್ ರೈತ ಉತ್ಪಾದಕರ ಕಂಪನಿ ಉದ್ಘಾಟಿಸಿ ಅವರು ಮಾತನಾಡಿದರು.

ಪುಣ್ಯಭೂಮಿ ಅಮೃತ್ ರೈತ ಉತ್ಪಾದಕರ ಕಂಪನಿಯು ಕೇಂದ್ರ ಸರ್ಕಾರದ ಬಹು ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಕೃಷಿ ಸಿಂಚಾಯಿ ಯೋಜನೆಯಡಿ ರೈತ ಸಮುದಾಯದ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರಕಿಸಿಕೊಡುವ ಜತೆಗೆ ರೈತರು ಸ್ವಂತ ಬ್ರಾಂಡಿಂಗ್ ಮೂಲಕ ಮಾರಾಟ ಮಾಡಿ, ರೈತರ ತಲಾ ಆದಾಯ ಹೆಚ್ಚಿಸುವ ದಿಸೆಯಲ್ಲಿ ರಾಜ್ಯಾದ್ಯಂತ 57 ತಾಲೂಕು ವ್ಯಾಪ್ತಿಯಲ್ಲಿ ಕಂಪನಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜೀವನೋಪಾಯ ಚಟುವಟಿಕೆ ಘಟಕದಿಂದ ಭೂ ರಹಿತ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಸುತ್ತು ನಿಧಿ ಯೋಜನೆಯಡಿ 4 ಪಂಚಾಯಿತಿಯ 769 ಸದಸ್ಯರನ್ನು ಹೊಂದಿರುವ 55 ಸ್ವಸಹಾಯ ಸಂಘಗಳಿಗೆ ತಲಾ ₹5 ಸಾವಿರ ಸುತ್ತುನಿಧಿ ಮಂಜೂರಾತಿ ಪತ್ರವನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಕಂಪನಿಯ ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲಾನಯನ ಸಮಿತಿ ಅಧ್ಯಕ್ಷರಾದ ಗೋಪಾಲಪ್ಪ, ಹನುಮಂತ ನಾಯ್ಕ, ಸವಿತ ಕಾಳಿಂಗಪ್ಪ, ಕಮಲಮ್ಮ, ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ, ಸಹಾಯಕ ಕೃಷಿ ನಿರ್ದೇಶಕ ಕಿರಣಕುಮಾರ್ ಹರ್ತಿ, ಮುಖಂಡ ಗುರುಮೂರ್ತಿ ಚನ್ನವೀರಪ್ಪ ಮತ್ತಿತರರು ಉಪಸ್ಥಿತರಿದ್ದರು.

- - -

ಬಾಕ್ಸ್‌

ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಶಿಬಿರ

ಶಿಕಾರಿಪುರ ತಾಲೂಕಿನ ಅಂಜನಾಪುರ ಹೋಬಳಿಯ ಹಿತ್ತಲ, ಅರಿಷಿಣಗೆರೆ, ಸಾಲೂರು, ಕಲ್ಮನೆ ವ್ಯಾಪ್ತಿಯ ಒಟ್ಟು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 2021- 22ರಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದೆ ಎಂದು ಸಂಸದ ರಾಘವೇಂದ್ರ ಹೇಳಿದರು.

ಪ್ರಾರಂಭಿಕ ಹಂತದಲ್ಲಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಸಭೆ, ಬೀದಿನಾಟಕ, ಗ್ರಾಮೀಣ ಸಹಭಾಗಿತ್ವದಲ್ಲಿ ಕಾರ್ಯಕ್ರಮ, ಸ್ತಬ್ಧಚಿತ್ರ, ಕರಪತ್ರ, ಮಹಿಳೆಯರಿಗೆ ಸ್ವಸಹಾಯ ಸಂಘಗಳ ತರಬೇತಿ, ಬಳಕೆದಾರ ಗುಂಪುಗಳಿಗೆ ಶಿಬಿರವನ್ನು ಆಯೋಜಿಸಲಾಗುವುದು ಎಂದರು. ಯೋಜನೆ ಅನುಷ್ಠಾನ ಹಂತದಲ್ಲಿ ತೋಟಗಾರಿಕೆ ಘಟಕದಿಂದ 18 ಸಾವಿರ ತೆಂಗು, 1 ಸಾವಿರ ಮಾವು, 3 ಸಾವಿರ ನಿಂಬೆ, 1 ಸಾವಿರ ಸೀಬೆ, 2.5 ಸಾವಿರ ಸಪೋಟ, 8 ಸಾವಿರ ನುಗ್ಗೆ ಸಸಿಗಳನ್ನು ವಿತರಿಸಲಾಗುತ್ತಿದೆ. ಅರಣ್ಯ ಘಟಕದಿಂದ ಕಿರು ಅರಣ್ಯ ಸ್ಥಾಪನೆಗೆ 4 ಹೆಕ್ಟೇರ್ ಜಾಗದಲ್ಲಿ ಹಾಗೂ ರೈತರ ವೈಯಕ್ತಿಕ ಜಮೀನುಗಳಿಗೆ ಶ್ರೀಗಂಧ, ಸಾಗುವಾನಿ, ಕರಿಮತ್ತಿ ಮತ್ತು ಇತರೆ ಜಾತಿಯ ಸಸಿಗಳನ್ನು 149 ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 5 ಸಾವಿರ ಸಸಿಗಳನ್ನು ನೆಡಲಾಗಿದೆ. ಸಾಮೂಹಿಕ ಭೂಮಿ ಅರಣ್ಯೀಕರಣಕ್ಕೆ 10 ಹೆಕ್ಟೇರ್ ಪ್ರದೇಶ ಮೀಸಲಿರಿಸಲಾಗಿದೆ ಎಂದು ತಿಳಿಸಿದರು. ಮಣ್ಣು ಮತ್ತು ನೀರು ಸಂರಕ್ಷಣೆಗೆ 34 ಅಮೃತ ಸರೋವರ, 59 ಕಿಂಡಿ ಅಣೆ ಕಾಮಗಾರಿ, 04 ಕೃಷಿ ಹೊಂಡ, 04 ನೀರುಗಾಲುವೆ ನಿರ್ಮಿಸಲಾಗಿದೆ. ಬೆಳೆಯ ಉತ್ಪಾದನೆ ಹೆಚ್ಚಿಸಲು 296 ಜೇನುಪೆಟ್ಟಿಗೆ ವಿತರಣೆ, 64 ಚಾಪ್ ಕಟರ್, 900 ಕಪ್ ಮ್ಯಾಟ್ (ಹಸುಗಳಿಗೆ ನೆಲಹಾಸು), 08 ಪಶು ಚಿಕಿತ್ಸೆ ಶಿಬಿರ, 4752 ತರಕಾರಿ ಕಿಟ್, 2250 ಮೇವಿನ ಬೀಜದ ಕಿಟ್‌ಗಳನ್ನು ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ 20 ರೊಟ್ಟಿ ಮಾಡುವ ಯಂತ್ರ, 17 ಪಲ್ವರೈಸರ್, 10 ಅಡಕೆ ದೋಟಿ, 9 ಎಣ್ಣೆಗಾಣ, 4 ಹಿಟ್ಟಿನ ಗಿರಣಿ, 1 ಶಾಮಿಯಾನ ಸೆಟ್ ವಿತರಿಸಲಾಗುವುದು ಎಂದು ತಿಳಿಸಿದ ಅವರು, ಈಗಾಗಲೇ 550 ಷೇರು ಸಂಗ್ರಹಿಸಿ, ಪ್ರಥಮ ಹೆಜ್ಜೆಯನ್ನಿಟ್ಟಿದ್ದು ಕಂಪನಿ ಅಧ್ಯಕ್ಷರಾಗಿ ವೀರೇಂದ್ರ ಪಾಟೀಲ್ ಹಾಗೂ 9 ನಿರ್ದೇಶಕರ ನೇಮಕವಾಗಿದೆ ಎಂದು ತಿಳಿಸಿದರು.

- - -

-7ಕೆ.ಎಸ್.ಕೆ.ಪಿ1:

ಶಿಕಾರಿಪುರ ತಾಲೂಕಿನ ಪುಣ್ಯಭೂಮಿ ಅಮೃತ್ ರೈತ ಉತ್ಪಾದಕರ ಕಂಪನಿ ಪದಾಧಿಕಾರಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Share this article