ಸರಕು, ಸೇವೆ ವಂಚನೆ ವಿರುದ್ಧ ಹೋರಾಡಿ: ವಿಜಯಲಕ್ಷ್ಮೀ

KannadaprabhaNewsNetwork | Published : Dec 30, 2024 1:04 AM

ಸಾರಾಂಶ

ಮಾರಾಟಗಾರರು ಗ್ರಾಹಕರಿಗೆ ಸರಕು ಮತ್ತು ಸೇವೆ ಸೂಕ್ತ ರೀತಿಯಲ್ಲಿ ನೀಡದೇ ವಂಚನೆ ಮಾಡಿದರೆ ಅದರ ವಿರುದ್ಧ ಬಳಕೆದಾರರು ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕು ಎಂದು ತುಮಕೂರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮೀ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಆರ್‌ಎಲ್ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಾಹಕರ ದಿನ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾರಾಟಗಾರರು ಗ್ರಾಹಕರಿಗೆ ಸರಕು ಮತ್ತು ಸೇವೆ ಸೂಕ್ತ ರೀತಿಯಲ್ಲಿ ನೀಡದೇ ವಂಚನೆ ಮಾಡಿದರೆ ಅದರ ವಿರುದ್ಧ ಬಳಕೆದಾರರು ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕು ಎಂದು ತುಮಕೂರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮೀ ಹೇಳಿದರು.

ನಗರದ ಆರ್.ಎಲ್. ಕಾನೂನು ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ "ರಾಷ್ಟ್ರೀಯ ಗ್ರಾಹಕರ ದಿನ " ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರ ಹಕ್ಕುಗಳು ಮತ್ತು ಹಿತರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದರು.

ಗ್ರಾಹಕರು ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು. ಆ ಮೂಲಕ ಗ್ರಾಹಕರ ಹಿತರಕ್ಷಣೆ ಕಾಪಾಡಬೇಕು. ಜೀವನದಲ್ಲಿ ನಿತ್ಯ ಬಳಕೆಗಾಗಿ ಅನೇಕ ಸಾಮಗ್ರಿ ಕೊಳ್ಳುವ ನಾವೆಲ್ಲರೂ ಗ್ರಾಹಕರೇ. ಗ್ರಾಹಕರ ರಕ್ಷಣೆಗಾಗಿ ಸರ್ಕಾರ ಕಾನೂನು ರೂಪಿಸಿ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ನೀಡಿದೆ. ಗ್ರಾಹಕರಿಗೆ ಸುರಕ್ಷತೆ, ವಸ್ತುವಿನ ಬಗ್ಗೆ ಮಾಹಿತಿ, ಆಯ್ಕೆ ಸ್ವಾತಂತ್ರ‍್ಯ ನೀಡಲಾಗಿದೆ. ಸರಕು ಮತ್ತು ಸೇವೆ ಸೂಕ್ತ ರೀತಿಯಲ್ಲಿ ನೀಡದೇ ಮೋಸ ಮಾಡಿದರೆ ಅದರ ವಿರುದ್ಧ ಬಳಕೆದಾರರು ನ್ಯಾಯಕ್ಕಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕು ಎಂದರು.

ಗ್ರಾಹಕರ ರಕ್ಷಣಾ ಕಾಯ್ದೆ 1986ಕ್ಕೆ ಮತ್ತಷ್ಟು ಬಲ ತುಂಬಿ ಗ್ರಾಹಕರ ರಕ್ಷಣಾ ಕಾಯ್ದೆ-2019 ರೂಪಿಸಲಾಗಿದೆ. ಈ ಕಾಯ್ದೆಗೆ ಆ.9ರಂದು ರಾಷ್ಟ್ರಪತಿಯವರ ಅಂಕಿತ ಬಿದ್ದಿದೆ. ಹೊಸ ಕಾಯ್ದೆ ಅನ್ವಯ ಜಿಲ್ಲಾ ಗ್ರಾಹಕರ ವೇದಿಕೆಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ₹20 ಲಕ್ಷ ಮೌಲ್ಯದ ವಸ್ತುಗಳ ನಷ್ಟದ ಪರಿಮಿತಿಯನ್ನು ₹1 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಜಾಗತಿಕವಾಗಿ ಬದಲಾದ ವ್ಯವಸ್ಥೆಯಲ್ಲಿ ಆನ್‌ಲೈನ್ ಖರೀದಿ ಹೆಚ್ಚುತ್ತಿದೆ. ಗ್ರಾಹಕರು ನೀಡುವ ಹಣಕ್ಕೆ ಸರಿಯಾದ ರೀತಿಯ ಮತ್ತು ಗುಣಮಟ್ಟದ ಸರಕು ನೀಡಬೇಕು. ಖರೀದಿಸಿದ ವಸ್ತುವಿನ ಪ್ರಮಾಣ, ಗುಣಮಟ್ಟದಲ್ಲಿ ವಂಚನೆಯಾದರೆ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಪ್ರಶ್ನಿಸುವ ಅಧಿಕಾರ ನೀಡಲಾಗಿದೆ ಎಂದರು.

ಪ್ರಾಚಾರ್ಯ ಡಾ. ಜಿ.ಎಸ್. ಯತೀಶ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಹೈ ಕೋರ್ಟ್ ವಕೀಲ ರಾಜಶೇಖರ, ಸಹಾಯಕ ಪ್ರಾಧ್ಯಾಪಕ ಬಿ.ಪಿ. ಬಸವನಗೌಡ, ದೈಹಿಕ ಶಿಕ್ಷಕ ಪವನ್, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾನೂನು ವಿದ್ಯಾರ್ಥಿ ಶ್ರೀನಿವಾಸ್ ಪ್ರಾರ್ಥಿಸಿ, ಸಹಾಯಕ ಪ್ರಾಧ್ಯಾಪಕ ಟಿ.ವಿದ್ಯಾಧರ ವೇದಮೂರ್ತಿ ಸ್ವಾಗತಿಸಿದರು. ಕಾನೂನೂ ವಿದ್ಯಾರ್ಥಿ ಪ್ರಶಾಂತ್ ನಿರೂಪಿಸಿದರು.

- - -

ಬಾಕ್ಸ್‌ * ''''ಮಾರಾಟಗಾರರೇ ಎಚ್ಚರ'''' ಎಂಬ ಸಂದೇಶ ಸಾರಬೇಕಾಗಿದೆ ಮಾರುಕಟ್ಟೆ ವ್ಯವಸ್ಥೆಯು ಇಂದು ನೈತಿಕತೆಗಳು ಹಾಗೂ ಮೌಲ್ಯಗಳ ಮೇಲೆ ನಡೆಯಬೇಕು. ಆಗ ಮಾತ್ರ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಮಾಧ್ಯಮಗಳಲ್ಲಿ ತೋರಿಸುವ ಕೆಲವೊಂದು ಜಾಹೀರಾತುಗಳು, ಉದಾಹರಣೆಗೆ ತಂಪು ಪಾನೀಯ ಕುಡಿದು ನೀರಿಗೆ ಹಾರುವುದು, ಗುಟುಕ ತಂಬಾಕುಗಳಂತಹ ಜಾಹೀರಾತುಗಳಿಂದ ಯುವಕರು ಮತ್ತು ಮಕ್ಕಳ ಮೇಲೆ ಅನೇಕ ಪ್ರಭಾವ ಬೀರುತ್ತಿದೆ, ''''''''ಗ್ರಾಹಕರೇ ಎಚ್ಚರ ಎನ್ನುವ ಬದಲು ಮಾರಾಟಗಾರರೇ ಎಚ್ಚರ'''''''' ಎಂಬ ಸಂದೇಶ ಸಾರುವ ಅವಶ್ಯಕತೆ ಇದೆ ಎಂದು ಎಲ್‌.ಎಚ್‌. ಅರುಣಕುಮಾರ ಹೇಳಿದರು.

- - - -28ಕೆಡಿವಿಜಿ38.ಜೆಪಿಜಿ:

ದಾವಣಗೆರೆಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನ ಕಾರ್ಯಕ್ರಮವನ್ನು ಜಿ.ಟಿ. ವಿಜಯಲಕ್ಷ್ಮೀ ಉದ್ಘಾಟಿಸಿದರು.

Share this article