ಕಳಪೆ ಬೀಜದ ವಿರುದ್ಧ ಹೋರಾಟ: ನಾಲ್ಕನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

KannadaprabhaNewsNetwork | Published : May 25, 2025 2:10 AM

ಕಳಪೆ ಬೀಜ ಮಾರಾಟದಿಂದ ರೈತರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕು ಹಾಗೂ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ರೈತರ ಜತೆ ರೈತ ಮುಖಂಡರು ನಾಲ್ಕು ದಿನಗಳಿಂದ ಬ್ಯಾಡಗಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬ್ಯಾಡಗಿ: ಕಳಪೆ ಬೀಜಗಳನ್ನು ಮಾರಾಟ ಮಾಡಲು ಬಿಟ್ಟು, ನಿಮ್ಮ ಸ್ವಾರ್ಥಕ್ಕಾಗಿ ನಮ್ಮನ್ನೇಕೆ ಬಲಿ ತೆಗೆದುಕೊಳ್ಳುತ್ತಿದ್ದೀರಿ? ಇದೇ ರೀತಿಯ ರೈತರ ಮೇಲಿನ ಅಸಡ್ಡೆ ಧೋರಣೆ ಮಂದುವರಿದರೆ ಮುಂದಿನ ದಿನಗಳಲ್ಲಿ ನಾವು ಆರಂಭಿಸುವ ಉಗ್ರ ಹೋರಾಟ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

ಕಳಪೆ ಬೀಜದಿಂದ ಅನ್ಯಾಯಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು, ಸಂತ್ರಸ್ತ ರೈತರೊಂದಿಗೆ ತಾಪಂ ಆವರಣದಲ್ಲಿರುವ ಶಾಸಕರ ಕಚೇರಿ ಎದುರು ನಡೆಸುತ್ತಿರುವ ಧರಣಿ 4ನೇ ದಿನ ಶನಿವಾರ ಬಂದಿದ್ದ ತಹಸೀಲ್ದಾರ್‌ ಜತೆ ಮಾತನಾಡಿದ ಅವರು, ನಾಲ್ಕು ದಿನಗಳಿಂದ ಇಲ್ಲಿ ಮಳೆ, ಬಿಸಿಲು ಎನ್ನದೇ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಸೌಜನ್ಯಕ್ಕಾದರೂ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದಿಲ್ಲ. ನೀವು ಕೂಡಾ ನಾಲ್ಕು ದಿನಗಳ ನಂತರ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಂಗಣ್ಣ ಎಲಿ ಮಾತನಾಡಿ, ನಮಗೆ ನ್ಯಾಯ ಸಿಗುವವರೆಗೂ ನಾವು ಹಿಂದೆ ಸರಿಯುವುದಿಲ್ಲ. ಶನಿವಾರ ಹಾಗೂ ಭಾನುವಾರ ಎರಡು ದಿನ ಅಧಿಕಾರಿಗಳು ಸರ್ಕಾರಿ ರಜೆಯಲ್ಲಿದ್ದರೂ ನಮಗೆ ರಜೆ ಇಲ್ಲ. ನಮ್ಮ ಹೋರಾಟ ಮುಂದುವರಿಯುತ್ತಲೆ ಇರುತ್ತದೆ. ಅನ್ನ ನೀಡುವ ನಮಗೆ ದೇಶದ 365 ದಿನ ಸಹ ಕೆಲಸ ತಪ್ಪುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ವಿವಿಧ ರೈತ ಮುಖಂಡರು ಭಾಗವಹಿಸಿದ್ದರು.

ತಹಸೀಲ್ದಾರ್‌ ಸಂಧಾನ ವಿಫಲ: ರೈತರನ್ನು ಸಮಾಧಾನಪಡಿಸಿ, ಪ್ರತಿಭಟನೆ ಕೈಬಿಟ್ಟು ಸಹಕರಿಸುವಂತೆ ಸಂಧಾನ ಮಾಡಲು ಮುಂದಾದ ತಹಸೀಲ್ದಾರ್‌ ಫಿರೋಜ ಷಾ ಸೋಮನಕಟ್ಟಿ ಅವರ ಮಾತಿಗೆ ಜಗ್ಗದ ರೈತರು, ನಾವು ಪ್ರತಿಭಟನೆ ಕೈಬಿಡುತ್ತೇವೆ. ನೀವೇ ಪರಿಹಾರ ಕೊಡಿ ಸ್ವಾಮಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್‌, ಇದಕ್ಕೆ ಪರಿಹಾರ ಕೊಡಲು ನಮ್ಮಲ್ಲಿ ಯಾವುದೇ ಅನುದಾನವಿಲ್ಲ ಎಂದು ಹೇಳಿ ಅಲ್ಲಿಂದ ತೆರಳಿದರು.ಕೆರಳಿದ ರೈತರು: ಹಲಗೆ ಬಾರಿಸುವ ಮೂಲಕ ನಾಲ್ಕನೇ ದಿನ ಪ್ರತಿಭಟನೆ ಆರಂಭಿಸಲಾಯಿತು. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾರೊಬ್ಬರೂ ಬಾರದೆ ಇದ್ದದ್ದು ರೈತರನ್ನು ಕೆರಳಿಸಿತು. ತಾಲೂಕಿನಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸಲು ಬಿಡುವುದಿಲ್ಲ, ಕಪ್ಪುಪಟ್ಟಿ ಪ್ರದರ್ಶನ ಕಡ್ಡಾಯವಾಗಲಿದೆ ಎಂದು ಆಕ್ರೋಶ ಹೊರಹಾಕಿದರು.ಯಾವ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ರೈತರ ಪರವಾಗಿಲ್ಲ ಎಂದು ಮತ್ತೆ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಸೋಮವಾರದಿಂದ ನಮ್ಮ ಹೋರಾಟ ಹಾದಿ ಬದಲಾಗಲಿದೆ. ನ್ಯಾಯ ಸಿಗುವ ವರೆಗೂ ಹೋರಾಟ ನಿಲ್ಲದು. ಮುಂದಿನ ದಿನಗಳಲ್ಲಿ ರೈತರ ಆಕ್ರೋಶ ಎದುರಿಸಲು ಸಜ್ಜಾಗಿ ಎಂದು ರೈತ ಮುಖಂಡ ರುದ್ರನಗೌಡ ಕಾಡನಗೌಡ್ರ ಹೇಳಿದರು.