- ಬಲವಾಗಿ ಬೀಸುತ್ತಿರುವ ಗಾಳಿ, ಮಲೆನಾಡಿನ ಹಲವೆಡೆ ಧರೆಗುರುಳಿದ ವಿದ್ಯುತ್ ಕಂಬಗಳು, ಮರಗಳು,
ಕಾಫಿಯ ನಾಡಿನಲ್ಲಿ ಪೂರ್ವ ಮುಂಗಾರಿನ ಅರ್ಭಟ ದಿನೇ ದಿನೇ ಹೆಚ್ಚಾಗುತ್ತಿದೆ. ವಾಡಿಕೆಗಿಂತ ಹೆಚ್ಚು ಮಳೆ ಯಾಗುತ್ತಿರುವುದರಿಂದ ರಾಜ್ಯ ಹವಮಾನ ಇಲಾಖೆ ಮುಂದಿನ ಮೂರು ದಿನಗಳವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹಾಗಾಗಿ ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮಳೆಯಿಂದಾಗಿ ಕಾಫಿ ನಾಡು ತತ್ತರಿಸುತ್ತಿದೆ. ಅದರಲ್ಲೂ ಮಲೆನಾಡಿನಲ್ಲಿ ಬಿಡುವಿಲ್ಲದೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅಲ್ಲದೆ ಬಲವಾಗಿ ಗಾಳಿ ಬೀಸುತ್ತಿರುವ ಪರಿಣಾಮ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆ ಗುರುಳುತ್ತಿವೆ. ಆದ್ದರಿಂದ ಹಲವು ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕೆಲವು ಕುಗ್ರಾಮಗಳಿಗೆ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಇಲ್ಲಿನ ಜನರು ಕಾಲ ಕಳೆಯುತ್ತಿದ್ದಾರೆ.ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಶುಕ್ರವಾರ ರಾತ್ರಿ ಯಿಂದಲೇ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದೆ. ದಟ್ಟವಾದ ಮೋಡ, ಥಂಡಿ ಗಾಳಿ, ನಿರಂತರವಾಗಿ ಬೀಳುತ್ತಿರುವ ಮಳೆಯ ಚಿತ್ರಣ ಮುಂಗಾರು ಮಳೆಯನ್ನು ಮೀರಿಸುವಂತಿದೆ.
ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲೂಕುಗಳಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ 3 ಗಂಟೆ ವೇಳೆಗೆ ಆರಂಭವಾದ ತುಂತುರು ಮಳೆ ಸಂಜೆ ನಂತರವೂ ಮುಂದು ವರಿದಿತ್ತು.
ಬಣಕಲ್ ಸಮೀಪದ ಚಕ್ಕಮಕ್ಕಿ ಗ್ರಾಮದಲ್ಲಿ ಮಹಮ್ಮದ್ ಎಂಬುವವರ ಕುರಿಶೆಡ್ ಮಳೆಗೆ ಕುಸಿದಿದ್ದು, ಒಳಗಿದ್ದ ಒಂದು ಕುರಿ ಸಾವನ್ನಪ್ಪಿದೆ ಹಾಗೂ ಹಲವಾರು ಕುರಿಗಳು ಗಾಯಗೊಂಡಿವೆ. ಈ ಘಟನೆದಿಂದ ಸಾಕಾಣಿಕೆ ನಷ್ಟ ಉಂಟಾಗಿದೆ.
ತಾಲೂಕಿನಾದ್ಯಂತ ಬಿರುಗಾಳಿಯಿಂದ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಹಲವಾರು ಗ್ರಾಮಗಳು ವಿದ್ಯುತ್ ಸಂಪರ್ಕದಿಂದ ತತ್ತರಿಸುತ್ತಿವೆ. ರಾತ್ರಿ ವೇಳೆ ಕತ್ತಲೆ ಮಡುವಿನಲ್ಲಿ ಗ್ರಾಮೀಣ ಜನತೆ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಕಳೆದ ಜನವರಿ 1 ರಿಂದ ಮೇ 24 ರವರೆಗೆ ಸರಾಸರಿ ವಾಡಿಕೆ ಮಳೆ 139.8 ಮಿ.ಮೀ. ಆದರೆ, ಪ್ರಸಕ್ತ ಸಾಲಿನಲ್ಲಿ ಈವರೆಗೆ ಬಂದಿರುವ ಮಳೆ 260.9 ಮಿ.ಮೀ. ಅಂದರೆ, ಹೆಚ್ಚವರಿಯಾಗಿ ಶೇ. 87 ರಷ್ಟು ಮಳೆಯಾಗಿದೆ. ಬಹುತೇಕ ಎಲ್ಲಾ ತಾಲೂಕುಗಳಲ್ಲೂ ವಾಡಿಕೆಗೂ ಮೀರಿ ಮಳೆಯಾಗಿದೆ.
24 ಕೆಸಿಕೆಎಂ 1ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮದ ಸುಶೀಲಾ ಎಂಬುವರ ಮನೆ ಮೇಲೆ ಮರ ಬಿದ್ದಿರುವುದು.