ನೀಟ್‌ ಫಲಿತಾಂಶ ಬಳಿಕ ಸೀಟು ಹಂಚಿಕೆಗೆ ಏಕೀಕೃತ ಕೌನ್ಸೆಲಿಂಗ್

KannadaprabhaNewsNetwork |  
Published : May 25, 2025, 02:07 AM ISTUpdated : May 25, 2025, 06:46 AM IST
NEET exam rules 2025

ಸಾರಾಂಶ

ನೀಟ್‌ ಫಲಿತಾಂಶ ಹಾಗೂ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಎಂಜಿನಿಯರಿಂಗ್‌, ವೈದ್ಯಕೀಯ ಸೇರಿ ಎಲ್ಲ ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆಗೂ ಏಕೀಕೃತ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

  ಬೆಂಗಳೂರು : ನೀಟ್‌ ಫಲಿತಾಂಶ ಹಾಗೂ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಎಂಜಿನಿಯರಿಂಗ್‌, ವೈದ್ಯಕೀಯ ಸೇರಿ ಎಲ್ಲ ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆಗೂ ಏಕೀಕೃತ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ಕೌನ್ಸೆಲಿಂಗ್‌ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧವಿದೆ. ಆದರೆ, ಯುಜಿ ನೀಟ್ ಆಧಾರದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡಬೇಕಾಗುತ್ತದೆ. ನಾಟಾ-2025 ಅಂಕಗಳ ಆಧಾರದಲ್ಲಿ ಆರ್ಕಿಟೆಕ್ಚರ್ ಸೀಟುಗಳನ್ನು ನೀಡಲಾಗುತ್ತದೆ. ಹಾಗಾಗಿ ನೀಟ್‌, ನಾಟಾ ಫಲಿತಾಂಶ ಪ್ರಕಟಗೊಂಡು ಕೌನ್ಸೆಲಿಂಗ್‌ ವೇಳಾಪಟ್ಟಿ ಹೊರಬರಬೇಕು. ಜೊತೆಗೆ ಈ ಸಾಲಿನಲ್ಲಿ ಹಂಚಿಕೆಗೆ ಲಭ್ಯ ಸೀಟುಗಳ ಪಟ್ಟಿಯೂ ಸಂಬಂಧಿಸಿದ ಪ್ರತಿ ಇಲಾಖೆಗಳಿಂದ ಕೆಇಎಗೆ ಸಲ್ಲಿಕೆಯಾಗಬೇಕು. ಆ ಬಳಿಕ ಏಕೀಕೃತ ಕೌನ್ಸೆಲಿಂಗ್‌ ಮೂಲಕ ಎಲ್ಲ ಕೋರ್ಸುಗಳ ಸೀಟು ಹಂಚಿಕೆ ನಡೆಸಲಾಗುವುದು ಎಂದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಬಾರಿ ಸಿಇಟಿ ಪರೀಕ್ಷೆಯನ್ನು ಹೆಚ್ಚು ಪಾರದರ್ಶಕವಾಗಿ ಹಾಗೂ ಅತ್ಯಂತ ಕಟ್ಟುನಿಟ್ಟಾಗಿ ನಡೆಸಿದೆ. ಅರ್ಜಿಯಲ್ಲಿನ ಫೋಟೋ ಆಧರಿಸಿ ಕೆಇಎ ಐಟಿ ತಂಡ ಅಭಿವೃದ್ಧಿಪಡಿಸಿದ ಮುಖ ಚಹರೆ ಪತ್ತೆ (ಫೇಸ್‌ ರೆಕಗ್ನಿಷನ್‌), ಮೊಬೈಲ್‌ ಆ್ಯಪ್‌ನಿಂದ ವಿದ್ಯಾರ್ಥಿಗಳನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡುವುದು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವೆಬ್‌ಕಾಸ್ಟಿಂಗ್‌ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಲೈವ್‌ ವೀಕ್ಷಣೆಯಂಥ ಹಲವು ಕ್ರಮಗಳನ್ನು ಕೈಗೊಂಡಿದ್ದು, ಪಾರದರ್ಶಕತೆ ಹೆಚ್ಚಲು ಕಾರಣವಾಯಿತು ಎಂದು ಸಚಿವರು ಹೇಳಿದರು.

11.67 ಲಕ್ಷಕ್ಕೂ ಹೆಚ್ಚು ಒಎಂಆರ್‌ಶೀಟ್‌ ಅಪ್‌ಲೋಡ್‌

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಈ ಬಾರಿ ಸಿಇಟಿ ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳ ಎಲ್ಲಾ ವಿಷಯಗಳ ಒಟ್ಟು 11,67,086 ಒಎಂಆರ್‌ ಶೀಟುಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಉತ್ತರ ಪತ್ರಿಕೆಗಳನ್ನು ವೀಕ್ಷಿಸಬಹುದಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಸಿಇಟಿ ಫಲಿತಾಂಶ ಪ್ರಕಟಿಸುವುದಕ್ಕೂ ಮುನ್ನ ಈ ಬಾರಿ ಎಲ್ಲ ವಿದ್ಯಾರ್ಥಿಗಳ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಪರಿಶೀಲಿಸಲಾಗಿದೆ. ಆನ್‌ಲೈನ್‌ ಪರಿಶೀಲನೆ ಆಗದಿರುವ ದಾಖಲೆಗಳನ್ನು ಆಯಾ ಪಿಯು ಕಾಲೇಜುಗಳಲ್ಲೇ ಪರಿಶೀಲಿಸಲಾಗಿದೆ. ಆಪ್ಷನ್‌ ಎಂಟ್ರಿಗೆ ದತ್ತಾಂಶ ಸಿದ್ಧವಾಗಿದೆ. ಇನ್ನು ಸಿಇಟಿ ಅಭ್ಯರ್ಥಿಗಳ ಪ್ರಶ್ನೆ, ಗೊಂದಲ, ಸಮಸ್ಯೆಗಳನ್ನು ಪರಿಹರಿಸಲು ಕೆಇಎ ಕಾಲ್‌ಸೆಂಟರ್‌ ಅನ್ನು 10 ಫೋನ್‌ ಲೈನ್‌ಗಳ ಅಳವಡಿಕೆ ಮೂಲಕ ಉನ್ನತೀಕರಿಸಲಾಗಿದೆ. ಇನ್ನು ಮುಂದೆ ವಾರದ ಎಲ್ಲಾ ದಿನ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಇದು ಕಾರ್ಯನಿರ್ವಹಿಸಲಿದೆ ಎಂದು ಸಚಿವರು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ