ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ತಂಬಾಕಿಗಾಗಿ ಕೈದಿಗಳ ಮಧ್ಯೆ ಮಾರಾಮಾರಿ : ಆಸ್ಪತ್ರೆಗೆ ದಾಖಲು

KannadaprabhaNewsNetwork |  
Published : Aug 30, 2024, 01:09 AM ISTUpdated : Aug 30, 2024, 12:23 PM IST
29ಕೆ1ಗಾಯಾಳುಗನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು.29ಕೆ2,3ಕಾರವಾರದ ಜಿಲ್ಲಾ ಕಾರಾಗೃಹಕ್ಕೆ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. | Kannada Prabha

ಸಾರಾಂಶ

ಪರಸ್ಪರ ಬಡಿದಾಡಿಕೊಂಡ ಮುಜಾಮಿಲ್ ಹಾಗೂ ಪರಾನ್, ಮಾದಕ ವಸ್ತುಗಳ ಸಾಗಾಟ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದರು.

ಕಾರವಾರ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ತಂಬಾಕು ಹಾಗೂ ಇತರೆ ವಸ್ತುಗಳಿಗಾಗಿ ಕೈದಿಗಳ ನಡುವೆ ಗಲಾಟೆ ನಡೆದಿದ್ದು, ಗಾಯಗೊಂಡ ಕೈದಿಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿರುವ ಜೈಲಿನ ವಾರ್ಡಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗಿದೆ. 

ಕಾರಾಗೃಹದಲ್ಲಿ ತಂಬಾಕು ಸೇರಿದಂತೆ ಇತರ ವಸ್ತುಗಳು ಸಿಗುವಂತಾಗಬೇಕು. ಬಿಗಿ ಭದ್ರತೆಯಿಂದಾಗಿ ಯಾವುದೆ ವಸ್ತು ಸಿಗುತ್ತಿಲ್ಲ ಎಂದು ಕೈದಿಗಳಾದ ಮಹಮ್ಮದ್ ಮುಜಾಮಿಲ್, ಫರಾನ್ ಛಬ್ಬಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗಲಾಟೆಗಿಳಿದರು. ಇವರಿಬ್ಬರೂ ಪರಸ್ಪರ ಕಲ್ಲಿನಿಂದ ತಲೆ ಜಜ್ಜಿಕೊಂಡು ಜೈಲಿನ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. 

ಇತರ ಕೈದಿಗಳಲ್ಲಿ ಹಲವರು ಇವರನ್ನು ಬೆಂಬಲಿಸಿದ್ದರಿಂದ ಜೈಲಿನಲ್ಲಿ ತುಸು ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮಾಹಿತಿ ನೀಡುತ್ತಿದ್ದಂತೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಗಾಯಗೊಂಡ ಇಬ್ಬರನ್ನು ಜಿಲ್ಲಾ ಆಸ್ಪತ್ರೆಯ ಕಾರಾಗೃಹ ವಾರ್ಡಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಯಿತು.

 ಜೈಲಿನಲ್ಲಿ ಮೂವರು ಮಹಿಳಾ ಕೈದಿಗಳೂ ಸೇರಿದಂತೆ ಒಟ್ಟೂ 142 ಕೈದಿಗಳಿದ್ದಾರೆ. ಈ ಘಟನೆಯಿಂದ ಉಳಿದ ಕೈದಿಗಳೂ ಕಿರುಚಾಡತೊಡಗಿದ್ದು, ಇನ್ನಷ್ಟು ಗದ್ದಲಕ್ಕೆ ಕಾರಣವಾಯಿತು. ಉಳಿದ ಕೈದಿಗಳ ಮನವೊಲಿಸಿ ಜೈಲಿನ ವಾತಾವರಣವನ್ನು ತಿಳಿಗೊಳಿಸಲಾಯಿತು.ಪರಸ್ಪರ ಬಡಿದಾಡಿಕೊಂಡ ಮುಜಾಮಿಲ್ ಹಾಗೂ ಪರಾನ್, ಮಾದಕ ವಸ್ತುಗಳ ಸಾಗಾಟ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದರು.

ಭದ್ರತೆ ಹೆಚ್ಚಳ: ಜೈಲಿನೊಳಗೆ ಯಾವುದೆ ವಸ್ತು ಬಿಡುತ್ತಿಲ್ಲ. ಭದ್ರತೆ ಹೆಚ್ಚಿಸಲಾಗಿದೆ ಎಂದು ಆರೋಪಿಸಿ ಮುಜಾಮಿಲ್ ಹಾಗೂ ಫರಾನ್ ಗಲಾಟೆ ಮಾಡಿಕೊಂಡು ಕಲ್ಲಿನಿಂದ ಪರಸ್ಪರ ಜಜ್ಜಿಕೊಂಡಿರುವುದು ಸಿಸಿ ಕ್ಯಾಮೆರಾ ಪರಿಶೀಲನೆಯಿಂದ ಗೊತ್ತಾಗಿದೆ. ಜೈಲಿನ ಅಧಿಕಾರಿಗಳು ಕರ್ತವ್ಯಕ್ಕೆ ಅಡ್ಡಿ ಕುರಿತು ದೂರು ನೀಡುತ್ತಿದ್ದು, ಅದನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಎಸ್ಪಿ ಸಿ.ಟಿ. ಜಯಕುಮಾರ್ ತಿಳಿಸಿದರು.

ಬಿಗಿ ಬಂದೋಬಸ್ತ್

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜೈಲುಗಳಲ್ಲಿ ಬಿಗಿ ಬಂದೋಬಸ್ತ್ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಾರವಾರ ಕಾರಾಗೃಹದಲ್ಲಿರುವ ಇಬ್ಬರು ಕೈದಿಗಳು ತಂಬಾಕು ಹಾಗೂ ಇತರ ವಸ್ತುಗಳಿಗಾಗಿ ಬೇಡಿಕೆ ಇಟ್ಟಿದ್ದಾರೆ. ಅದನ್ನು ನಿರಾಕರಿಸಿದಾಗ ಗದ್ದಲ ಉಂಟಾಗಿದೆ. ಸದ್ಯಕ್ಕೆ ಗಲಾಟೆ ನಿಯಂತ್ರಣಕ್ಕೆ ಬಂದಿದೆ. ಜೈಲಿನಲ್ಲಿ ಬಿಗಿಯಾದ ಬಂದೋಬಸ್ತ್ ಏರ್ಪಡಿಸಲಾಗಿದೆ.

PREV

Recommended Stories

ರಾಜ್ಯೋತ್ಸವಕ್ಕೆ ಅನುಮತಿ ನೀಡದ ಬಿಎಚ್‌ಇಎಲ್‌ ಸಂಸ್ಥೆ : ಖಂಡನೆ
ರೇಣುಕಾಸ್ವಾಮಿ ರೀತಿ ಕೊಲೆ ಮಾಡುವ ಬೆದರಿಕೆ : ಎಫ್ಐಆರ್‌