ಕಾರವಾರ: ಕೇಣಿ ವಾಣಿಜ್ಯ ಬಂದರು ನಿರ್ಮಾಣಕ್ಕಾಗಿ ಜೆಎಸ್ ಡಬ್ಲ್ಯೂ ಕಂಪನಿ ಸ್ಥಳೀಯರಿಗೆ ಆಮಿಷ ಒಡ್ಡಿ ದಾರಿ ತಪ್ಪಿಸುತ್ತಿದ್ದು, ಆದರೆ ಯಾವುದೇ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ಹೋರಾಟ ಮುಂದುವರಿಸುವುದಾಗಿ ಕೇಣಿ ವಾಣಿಜ್ಯ ಬಂದರು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಸಂಜೀವ್ ಬಳೆಗಾರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿ ನಡೆಸಿದ ಅವರು, ಯೋಜನೆಯು ಇನ್ನೂ ಪ್ರಾಥಮಿಕ ಹಂತದಲ್ಲಿದ್ದರೂ ಕಂಪನಿಯು ಲಾಭಗಳ ಬಗ್ಗೆ ಊಹಾಪೋಹದ ಹೇಳಿಕೆ ನೀಡುತ್ತಿದೆ ಎಂದು ದೂರಿದರು. ನಾವು ಅಭಿವೃದ್ಧಿ ವಿರೋಧಿಗಳಲ್ಲ, ಆದರೆ ಸುಸ್ಥಿರ ಅಭಿವೃದ್ಧಿಯ ಪರವಾಗಿದ್ದೇವೆ. ರಾಷ್ಟ್ರೀಯ ಸಂಪನ್ಮೂಲಗಳನ್ನು ನಾಶಮಾಡಿ, ಸ್ಥಳೀಯರನ್ನು ನಿರಾಶ್ರಿತರನ್ನಾಗಿಸುವ ಯಾವುದೇ ಅಭಿವೃದ್ಧಿಯನ್ನು ನಾವು ವಿರೋಧಿಸುತ್ತೇವೆ ಎಂದರು.ಜಿಲ್ಲೆಯ ಜನರು ಈಗಾಗಲೇ ನೌಕಾನೆಲೆ, ಅಣು ವಿದ್ಯುತ್ ಸ್ಥಾವರ, ಚತುಷ್ಪಥ ಹೆದ್ದಾರಿ ಮತ್ತು ಜಲವಿದ್ಯುತ್ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಉದ್ಯೋಗಾವಕಾಶಗಳಿಂದ ವಂಚಿತರಾಗಿದ್ದಾರೆ. ಈ ಯೋಜನೆಗಳಿಂದ ಇದುವರೆಗೆ ದೊರೆತಿರುವ ಉದ್ಯೋಗಗಳು ಕಸಗುಡಿಸುವುದು ಅಥವಾ ಡಿ ದರ್ಜೆಯ ಕೆಲಸಗಳಾಗಿದ್ದು, ಅವು ಕೂಡ ನಿರಾಶ್ರಿತರಾದ ಕೆಲವೇ ಮಂದಿಗೆ ಮಾತ್ರ ಸಿಕ್ಕಿವೆ. ಯೋಜನೆ ಪ್ರಾರಂಭವಾಗುವ ಮೊದಲು ನೀಡಿದ ಭರವಸೆ ಈಡೇರಿಸಿಲ್ಲ. ಸರ್ಕಾರ ಈವರೆಗೆ ಸ್ಥಳೀಯರಿಗೆ ನೀಡಿರುವ ಉದ್ಯೋಗಾವಕಾಶಗಳ ಬಗ್ಗೆ ಅಂಕಿಅಂಶಗಳೊಂದಿಗೆ ಮಾಹಿತಿ ನೀಡಲಿ ಎಂದು ಬಳೆಗಾರ್ ಸವಾಲು ಹಾಕಿದರು.
ಮಂಗಳೂರು ಮತ್ತು ಗೋವಾ ಬಂದರುಗಳಿಂದ ಅಭಿವೃದ್ಧಿಯಾಗಿದೆ ಎಂಬ ಕಂಪನಿಯ ಹೇಳಿಕೆ ಸುಳ್ಳು. ಆ ಪ್ರದೇಶಗಳು ತೀವ್ರ ಮಾಲಿನ್ಯಕ್ಕೆ ಒಳಗಾಗಿವೆ. ಜಿಲ್ಲೆಯ ಮೀನುಗಾರಿಕಾ ಉದ್ಯಮವು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದು, ಬಂದರು ಯೋಜನೆ ಮೀನುಗಾರಿಕೆಗೆ ತೊಂದರೆ ನೀಡಿದರೆ ಲಕ್ಷಾಂತರ ಜನರ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಬಂದರು ಯೋಜನೆ ರೆಡ್ ಕೆಟಗೆರಿಗೆ ಸೇರಿದ್ದು, ಪರಿಸರಕ್ಕೆ ಅತ್ಯಂತ ಹಾನಿಕಾರಕವಾಗಿದೆ. ನೈಸರ್ಗಿಕ ಕರಾವಳಿ ಸಂಪತ್ತನ್ನು ಪ್ರವಾಸೋದ್ಯಮಕ್ಕೆ ಬಳಸುವ ಬದಲು ವಿನಾಶಕಾರಿ ಯೋಜನೆಗಳನ್ನು ನಾವು ಸಹಿಸುವುದಿಲ್ಲ ಎಂದು ತಿಳಿಸಿದರು.
ಚಂದ್ರ ಕಾಮತ ಶೆಟಗುಳಿ, ವಾಣಿಜ್ಯ ಬಂದರು ನಿರ್ಮಾಣವಾಗುವ ಪ್ರದೇಶದಲ್ಲಿ 3.5 ಕಿಮೀ ತಡೆಗೋಡೆ ನಿರ್ಮಾಣವಾದರೆ ಗೋಕರ್ಣದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಲಿದೆ. ಇದು ಅಲ್ಲಿನ ಪ್ರವಾಸೋದ್ಯಮಕ್ಕೆ ಸಂಪೂರ್ಣ ತೊಂದರೆಯಾಗಲಿದೆ. ಈ ಹಿಂದೆ ನೌಕಾನೆಲೆಯಿಂದ ತಡೆಗೋಡೆ ನಿರ್ಮಾಣವಾದಾಗ ಬೆಳಾಂಬರದಲ್ಲಿ ಅಲೆಗಳು ಹೆಚ್ಚಾಗಿ ಕಡಲತೀರಕ್ಕೆ ಹಾನಿಯಾಗಿದೆ. ಇದಕ್ಕೆ ಯಾವುದೇ ಅಧ್ಯಯನ ಬೇಕಾಗಿಲ್ಲ; ಕಡಲಿನೊಂದಿಗೆ ನಿತ್ಯ ಜೀವನ ನಡೆಸುವ ಮೀನುಗಾರರಿಗೆ ಇದು ಅರ್ಥವಾಗುತ್ತದೆ. ಆದ್ದರಿಂದ ಸ್ಥಳೀಯರು ಇಂತಹ ಸುಳ್ಳು ಮಾಹಿತಿಗಳಿಗೆ ಬಲಿಯಾಗದೆ ವಾಸ್ತವತೆ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.ಪ್ರಮುಖರಾದ ಹೂವಾ ಖಂಡೇಕರ, ಮಂಜುನಾಥ ಟಾಕೇಕರ, ಚಂದ್ರಕಾಂತ, ಮಧ್ವರಾಜ ಜ್ಞಾನೇಶ್ವರ ಹರಿಕಂತ್ರ, ವಿಜಯ ತಾಂಡೇಲ, ರಮೇಶ ಕುರ್ವೇ, ನೀಲೇಶ ಹರಿಕಂತ್ರ, ಗಿರೀಶ ಹರಿಕಂತ್ರ ಇದ್ದರು.