ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಯುವ ಸಮುದಾಯವು ಮಾದಕ ವಸ್ತುಗಳ ಬಳಕೆ ಮಾಡುವುದನ್ನು ತಡಗಟ್ಟಲು ಮತ್ತು ಮಾದಕ ವಸ್ತುಗಳಿಂದಾಗುವ ದುಷ್ಪಪರಿಣಾಮಗಳ ವಿರುದ್ಧ ಸಮರಸಾರುವ ಹಾಗೂ ಜನರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಬೃಹತ್ ಜಾಥಾ ನಡೆಯಿತು.ಜಾಥಾ ಕಾರ್ಯಕ್ರಮಕ್ಕೆ ವಿರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಸಮಾಜಕ್ಕೆ ಮಾರಕವಾಗಿದ್ದು, ದೇಶದ ಭವಿಷ್ಯವನ್ನು ಹಾಳುಮಾಡುವ ಶಕ್ತಿಯಂತೆ ಮಾದಕ ವ್ಯಸನಿಗಳು ಹೊರಹೊಮ್ಮಿದ್ದಾರೆ. ಹೊರಗಿನ ಶತ್ರುಗಳಿಗಿಂತ ಆಂತರಿಕ ಶತ್ರುಗಳು ಸಮಾಜಕ್ಕೆ ಹೆಚ್ಚು ಭಯ ತರುತ್ತಾರೆ. ಪೊಲೀಸ್ ಇಲಾಖೆಯು ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಮಾಡುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ನ್ಯಾಯಾಂಗ ವ್ಯವಸ್ಥೆಯು ಇಂತಹ ಪ್ರಕರಣಗಳಲ್ಲಿ ಸಮಾಜದ ಒಳಿತಿಗಾಗಿ ಸಮಾಜದ ಹಿತ ಕಾಪಾಡುವ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ ಬೇಲ್ ನೀಡುವ ಸಂದರ್ಭದಲ್ಲಿ ಹೆಚ್ಚು ಎಚ್ಚರಿಕೆಯಿಂದ ತೀರ್ಪು ನೀಡಬೇಕು. ಡ್ರಗ್ಸ್ ಮುಕ್ತ ಭಾರತ ನಿರ್ಮಾಣಕ್ಕೆ ಯುವ ಜನತೆಯು ಒಂದಾಗಿ ಹೋರಾಟ ಮಾಡಬೇಕು ಎಂದರು.ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ಜಿಲ್ಲೆ, ರಾಜ್ಯ, ದೇಶದ ವಿವಿಧ ಭಾಗಗಳಲ್ಲಿ ಸಮಾಜ ಘಾತುಕ (ಕ್ರೀಮಿನಲ್ ಪ್ರಕರಣ)ಗಳು ಹೆಚ್ಚಾಗಿವೆ. ಹಲವಾರು ಪ್ರಕರಣಗಳಲ್ಲಿ ಆರೋಪಿಗಳು ಮಾದಕ ವ್ಯಸನಿಗಳಾಗಿದ್ದರು ಎಂದು ಪ್ರಕರಣದ ತನಿಖೆಗಳಲ್ಲಿ ಕಂಡುಬಂದಿದೆ. ಮಾದಕ ವಸ್ತುಗಳ ಬಳಕೆಯಿಂದ ಕುಟುಂಬ, ಸ್ನೇಹಿತರು, ಸಮಾಜವು ವ್ಯಕ್ತಿಯಿಂದ ದೂರ ಸರಿಯುತ್ತಾರೆ. ಇಂದಿನಿಂದ ಡ್ರಗ್ಸ್ ಮುಕ್ತ ಪರಿಸರಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ ಎಂದರು.2021ರಲ್ಲಿ 15 ಪ್ರಕರಣಗಳು ದಾಖಲಾಗಿದ್ದು, 36 ಮಂದಿ ಆರೋಪಿಗಳನ್ನು ಬಂಧಿಸಿ, 7 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. 2022ರಲ್ಲಿ 21 ಪ್ರಕರಣಗಳಲ್ಲಿ 49 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, 22 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. 2023ರಲ್ಲಿ 101 ಪ್ರಕರಣಗಳು ದಾಖಲಾಗಿದೆ. ಮೂರು ವರ್ಷಗಳಲ್ಲಿ ಒಟ್ಟು 232 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಸುಮಾರು 80 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಇದು ಅಲ್ಲದೆ ಮಾದಕ ವಸ್ತುಗಳ ನಿಷೇಧ ಕಾಯ್ದೆ ಅಡಿಯಲ್ಲಿ ಸಿಂಥಟಿಕ್ ಡ್ರಗ್ಸ್ ಎಂ.ಡಿ.ಎಂ. 154 ಗ್ರಾಂ, ಎಲ್.ಎಸ್.ಡಿ. 9 ಸ್ಟೀಪ್ಸ್, 3 ಗ್ರಾಂ ಕೋಕೆನ್ ವಶಕ್ಕೆ ಪಡಿಸಿಕೊಂಡು ಪ್ರಕರಣ ದಾಖಲು ಮಾಡಲಾಗಿದೆ. ಡ್ರಗ್ಸ್ ವಿಷಯದಲ್ಲಿ ಇಲಾಖೆ ಸಮಾಜಕ್ಕೆ ಜನಜಾಗೃತಿ ತರುವುದು ಮಾತ್ರವಲ್ಲದೆ ಕಠಿಣ ಕ್ರಮಗಳನ್ನು ಜರುಗಿಸಲು ಹಿಂಜರಿಯುವುದಿಲ್ಲ. ಆದ್ದರಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯುವ ಜನತೆಯೇ ಕಾರಣವಾಗಬೇಕು. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಯುವ ಜನತೆ ಹೋರಾಟ ಮಾಡಬೇಕು ಎಂದು ಹೇಳಿದರು.
* ವಿವಿಧ ಶಾಲೆ ವಿದ್ಯಾರ್ಥಿಗಳು ಭಾಗಿಜಾಥಾವು ವಿರಾಜಪೇಟೆ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ತಾಲೂಕು ಮೈದಾನದಲ್ಲಿ ಮುಕ್ತಾಯಗೊಂಡಿತು. ಜಾಥಾದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಪತ್ನಿ ಕಾಂಚನ ಪೊನ್ನಣ್ಣ ಹೆಜ್ಜೆ ಹಾಕಿದರು. ಕೊಡಗು ದಂತ ವೈದ್ಯಕೀಯ ಕಾಲೇಜು, ರೋಟರಿ ಶಾಲೆ, ಲಿಟಲ್ ಸ್ಟಾರ್ಸ್ ಅಕಾಡೆಮಿ ಶಾಲೆ, ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಲಯನ್ಸ್ ಶಾಲೆ, ಎಸ್.ಎಂ.ಎಸ್. ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ವಿರಾಜಪೇಟೆ ಪುರಸಭೆ ಸಿಬ್ಬಂದಿ ಭಾಗವಹಿಸಿದ್ದರು.ಕೊಡಗು ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಕೆ.ಎಸ್. ಸುಂದರ್ ರಾಜ್, ವಿರಾಜಪೇಟೆ ಉಪವಿಭಾಗ ಪೊಲೀಸ್ ಅಧೀಕ್ಷಕ ಆರ್.ಮೋಹನ್ ಕುಮಾರ್, ವೃತ್ತ ನೀರಿಕ್ಷಕ ಬಿ.ಎಸ್. ಶಿವರುದ್ರ, ಪುರಸಭೆಯ ಮುಖ್ಯಾಧಿಕಾರಿ ಎ.ಚಂದ್ರಕುಮಾರ್, ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಠಾಣಾಧಿಕಾರಿ, ಪುರಸಭೆಯ ಸದಸ್ಯರಾದ ಡಿ.ಪಿ. ರಾಜೇಶ್ ಪದ್ಮನಾಭ, ಪಟ್ಟಡ ರಂಜಿ ಪೂಣಚ್ಚ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಶಾಲೆಯ ವಿಧ್ಯಾರ್ಥಿಗಳು ಪೊಲೀಸ್ ಸಿಬ್ಬಂದಿ ಹಾಜರಿದ್ದರು.