ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ತಾಲೂಕಿನ ದಾಸರಹಳ್ಳಿ ತಾಂಡಾದಲ್ಲಿ ಸೇರಿದಂತೆ ಹಳ್ಳಿಗಳ ಡಬ್ಬಾ ಅಂಗಡಿಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಬಡ ಕುಟುಂಬಗಳ ಜೀವನ ಬೀದಿಗೆ ಬಂದಿದೆ. ಈ ಕೂಡಲೇ ತಡೆಗಟ್ಟದಿದ್ದರೇ ಸಂಬಂಧಪಟ್ಟ ಕಚೇರಿ ಮುಂದೆಯೇ ಹೋರಾಟ ಮಾಡುವುದಾಗಿ ಜಿಪಂ ಮಾಜಿ ಸದಸ್ಯೆ ಎಸ್.ಎಂ. ಲಲಿತಾಬಾಯಿ ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ತಹಸೀಲ್ದಾರ್ ಜಿ.ಸಂತೋಷಕುಮಾರಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೆಲ ಪ್ರಭಾವಿ ರಾಜಕಾರಣಿಗಳ ಹಿಂಬಾಲರು ಮತ್ತು ದಾಸರಹಳ್ಳಿ ತಾಂಡಾದ 3-4 ಜನ ಸರ್ಕಾರಿ ನೌಕರರು ಸೇರಿ ಅಕ್ರಮ ಮದ್ಯ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ನಿತ್ಯ ಗಂಡ ಹೆಂಡತಿ ಮತ್ತು ಮಕ್ಕಳ ನಡುವೆ ಜಗಳ ನಡೆಯುತ್ತಿದೆ. ಜೀವನದಲ್ಲಿ ಅವರ ನೆಮ್ಮದಿಯನ್ನೇ ಹಾಳು ಮಾಡಿಕೊಂಡಿದ್ದಾರೆ. ಸಂಜೆಯಾಗುತ್ತಿದಂತೆಯೇ ಮಹಿಳೆಯರು ರಸ್ತೆಯಲ್ಲಿ ಓಡಾಡಲು ಭಯ ಪಡುವ ಪರಿಸ್ಥಿತಿ ಇದೆ. ಆದರಿಂದ ಗ್ರಾಮದ ವಾತಾವರಣವನ್ನು ಹಾಳು ಮಾಡಿರುವ ಈ ಅಕ್ರಮ ಮದ್ಯ ಮಾರಾಟಗಾರರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿರುವ ಮದ್ಯದಂಗಡಿಯವರೇ ಈ ಡಬ್ಬಾ ಅಂಗಡಿಗಳಿಗೆ ಅಕ್ರಮ ಮದ್ಯ ಪೂರೈಸುತ್ತಿದ್ದಾರೆ. ಅವರನ್ನು ಪತ್ತೆ ಮಾಡಿ ಆ ಅಂಗಡಿಗಳ ಪರವಾನಗಿ ರದ್ದು ಮಾಡಬೇಕು, ಎಲ್ಲಾ ಕಡೆಗೂ ಅಕ್ರಮ ಮದ್ಯ ಮಾರಾಟವಾಗುತ್ತಿದ್ದರೂ, ಅಬಕಾರಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಅವರೇ ಈ ದಂಧೆಗೆ ಸಾಥ್ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.ಹಳ್ಳಿಗಳಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ, ಅಬಕಾರಿ ಮತ್ತು ಪೊಲೀಸ್ ಇಲಾಖೆ ಮೌನ ವಹಿಸಿದ್ದಾರೆ. ಈ ದಂಧೆಗೆ ಕಡಿವಾಣ ಹಾಕದಿದ್ದರೇ ಅಬಕಾರಿ ಕಚೇರಿ ಮುಂದೆಯೇ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ತಾಪಂ ಮಾಜಿ ಸದಸ್ಯ ಸೋಮಿನಾಯ್ಕ, ತಿಮ್ಮಾನಾಯ್ಕ ಇತರರಿದ್ದರು.