ಹಳಿಯಾಳ: ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕಳಂಕ ತರಲು ಸತತವಾಗಿ ಯತ್ನಸುತ್ತಿರುವ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಳಿಯಾಳ ತಾಲೂಕಿನ ಧರ್ಮಸ್ಥಳದ ಸಾವಿರಾರು ಭಕ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ಪಟ್ಟಣದ ಶ್ರೀ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಅಪಾರ ಭಕ್ತರು, ಬಸ್ ಸ್ಟ್ಯಾಂಡ್ ರಸ್ತೆ ಮೂಲಕ ಸಾಗಿ, ಅರ್ಬನ್ ಬ್ಯಾಂಕ್ ಸರ್ಕಲದಿಂದ ಪಟ್ಟಣದ ಮುಖ್ಯ ಪೇಟೆ ಮಾರ್ಗವಾಗಿ ಸಾಗಿ ತಾಲೂಕು ಆಡಳಿತ ಸೌಧ ಆವರಣದಲ್ಲಿ ಜಮಾಯಿಸಿ, ಸಭೆ ನಡೆಸಿದರು.ನಮ್ಮ ಸಹನೆ ತಾಳ್ಮೆ ಪರೀಕ್ಷಿಸಬೇಡಿ:
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಶ್ರೀಪತಿ ಭಟ್, ಧರ್ಮಸ್ಥಳವು ಪುಣ್ಯಕ್ಷೇತ್ರವಾಗಿದ್ದು, ನಮ್ಮ ಪುಣ್ಯಕ್ಷೇತ್ರದ ವಿರುದ್ಧ ನಡೆದಿರುವ ಅಪಪ್ರಚಾರ ಖಂಡನೀಯ. ಪವಿತ್ರ ಸ್ಥಳದ ಪಾವಿತ್ರ್ಯಕ್ಕೆ ಕಳಂಕ ತರುವಂತಹ ಈ ದುಷ್ಕೃತ್ಯಗಳನ್ನು ನಾವು ಎಂದೂ ಸಹಿಸಲ್ಲ, ನಮ್ಮ ಸಹನೆ ತಾಳ್ಮೆಯನ್ನು ಪರೀಕ್ಷಿಸಬೇಡಿ, ಧರ್ಮ ಉಳಿವಿಗಾಗಿ ನಾವೆಲ್ಲರೂ ಕೈಜೋಡಿಸಲಿದ್ದು, ತಾಲೂಕಿನ ಸಮಸ್ತ ಧರ್ಮಸ್ಥಳದ ಭಕ್ತರು ನಮ್ಮ ಬೆಂಬಲವನ್ನು ಧರ್ಮಾಧಿಕಾರಿ ಹಾಗೂ ಶ್ರೀ ಕ್ಷೇತ್ರಕ್ಕೆ ಘೋಷಿಸುತ್ತೇವೆ ಎಂದರು.ತಾಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ದೇಮಾಣಿ ಶಿರೋಜಿ ಮಾತನಾಡಿದರು. ಜೈನ ಸಮಾಜದ ಪ್ರಮುಖರಾದ ಧರಣೇಂದ್ರ ದೊಡ್ಡಜೈನ ಅವರು ಮನವಿ ಓದಿದರು. ಪ್ರತಿಭಟನಾ ಸಭೆಯ ಆನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ ಅವರಿಗೆ ಸಲ್ಲಿಸಲಾಯಿತು. ಸಿಪಿಐ ಜಯಪಾಲ್ ಪಾಟೀಲ, ಪಿಎಸ್‌ಐ ಬಸವರಾಜ ಮಬನೂರ ಇದ್ದರು.
ಪ್ರತಿಭಟನೆಯಲ್ಲಿ ಶ್ರೀಧರ ಹೊಸ್ಮನಿ, ಅನಿಲ ಜೈನ್, ಬಸವರಾಜ ಲಕ್ಕನಗೌಡ್ರ, ಪೂಜಾ ದೂಳಿ, ಕಲ್ಪನಾ ಪಾಟೀಲ, ಹಿಂದೂ ಜನಜಾಗೃತಿ ಸಮಿತಿ ಮುಖ್ಯಸ್ಥ ವಿಠೋಬಾ ಮಾಳ್ಸೆಕರ, ಗೋಸಾಯಿ ಸಮಾಜದ ಸತ್ಯಜಿತ ಗಿರಿ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ಇದ್ದರು.