ಕನಕಗಿರಿ:
ತಾಲೂಕಿನಾದ್ಯಂತ ಯೂರಿಯಾ ಗೊಬ್ಬರದ ಅಭಾವದಿಂದ ಬೇಸತ್ತಿರುವ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಖಾಸಗಿ ಅಂಗಡಿಗಳಲ್ಲಿ ಗೊಬ್ಬರ ಸರಬರಾಜು ಮಾಡಿ ನಂತರ ಮೇಲಾಧಿಕಾರಿಗಳ ಆದೇಶದ ಮೇರೆಗೆ ನಿಯಮಾನುಸಾರ ಗೊಬ್ಬರ ಹಂಚಿಕೆ ಮಾಡಲಾಗುತ್ತಿದೆ. ಆದರೆ, ಅನ್ಯ ತಾಲೂಕುಗಳಾದ ಕೊಪ್ಪಳ ಮತ್ತು ಯಲಬುರ್ಗಾ ವ್ಯಾಪ್ತಿಯ ಗ್ರಾಮಗಳು ರೈತರು ಪಟ್ಟಣಕ್ಕೆ ಬಂದು ಯೂರಿಯಾ ಖರೀದಿಸುತ್ತಿದ್ದರಿಂದ ಕನಕಗಿರಿ ತಾಲೂಕು ವ್ಯಾಪ್ತಿಯ ರೈತರಿಗೆ ಗೊಬ್ಬರದ ಸಮಸ್ಯೆ ತೀವ್ರವಾಗಿದೆ.ತಾಲೂಕಿನಲ್ಲಿ ಮೆಕ್ಕೆಜೋಳ ಹಾಗೂ ತೊಗರಿ ಬೆಳೆ ಯಥೇಚ್ಛವಾಗಿ ಬೆಳೆದಿದ್ದರಿಂದ ಈ ಬಾರಿ ಯೂರಿಯಾ ಸಮಸ್ಯೆಯಾಗಿದೆ. ಈ ವರೆಗೂ ತಾಲೂಕಿನಲ್ಲಿ 1556 ಮೆಟ್ರಿಕ್ ಟನ್ ಮಾರಾಟವಾಗಿರುವುದು ದೃಢೀಕರಿಸಲಾಗಿದೆ. ಆದರೂ ರೈತರು ಯೂರಿಯಾಕ್ಕಾಗಿ ಪರದಾಡುವುದು ನಿಲ್ಲುತ್ತಿಲ್ಲ. ಕಳೆದ ಬಾರಿ ಗೊಬ್ಬರ ಖರೀದಿಸಿದವರು ಈಗ ಮತ್ತೊಮ್ಮೆ ಕೊಳ್ಳುತ್ತಿರುವುದು ದಾಖಲೆಗಳ ಮೂಲಕ ಕಂಡುಬಂದಿದೆ. ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ರೈತರು ಬಂದು ಯೂರಿಯಾ ಖರೀದಿಸುವುದರಿಂದ ಸ್ಥಳೀಯ ರೈತರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸ್ಥಳೀಯ ಅಂಗಡಿಕಾರರು ರೈತರಿಗೆ ಯೂರಿಯಾ ಜತೆಗೆ ಬೇರೆ ಲಿಂಕ್ ಕ್ರಿಮಿನಾಶಕ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಇದು ರೈತರಿಗೆ ಹೊರೆಯಾಗಲಿದೆ. ವ್ಯಾಪಾರದ ದೃಷ್ಟಿಯಿಂದ ಅಂಗಡಿ ಮಾಲೀಕರು ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಅಧಿಕಾರಿಗಳು ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕು.
ಮುದಿಯಪ್ಪ ಮಲ್ಲಿಗೆವಾಡ, ರೈತ ಸಂಘದ ಜಿಲ್ಲಾಧ್ಯಕ್ಷ (ವಾಸುದೇವ ಬಣ). ರೈತರಿಗೆ ಬೇಡಿಕೆ ಅನುಗುಣವಾಗಿ ಯೂರಿಯಾ ವಿತರಿಸುತ್ತೇವೆ. ಯಾವ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಕಂಪನಿಗಳು ಗೊಬ್ಬರ ಸರಬರಾಜು ಮಾಡಿದಂತೆ ನಿಯಮಾನುಸಾರ ರೈತರಿಗೆ ನಿಗದಿತ ಬೆಲೆಗೆ ಹಂಚಿಕೆ ಮಾಡಲಾಗುತ್ತಿದೆ. ಯೂರಿಯಾಕ್ಕೆ ಲಿಂಕ್ ತೆಗೆದುಕೊಳ್ಳುವಂತೆ ಒತ್ತಾಯಿಸುವ ಅಂಗಡಿ ಮಾಲೀಕರ ವಿರುದ್ಧ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ.ಅಭಿಲಾಷಾ ಸಿ.ಆರ್, ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ ಗಂಗಾವತಿ