ಕುಷ್ಟಗಿ:
ತಾಲೂಕಿನ ನೆರೆಬೆಂಚಿ ಗ್ರಾಮಕ್ಕೆ ಸ್ಥಳಾಂತರಗೊಂಡ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಹನುಮಸಾಗರದಲ್ಲಿಯೇ ಮುಂದುವರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಜಿಪಂ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.ನಜಿರಸಾಬ್ ಮೂಲಿಮನಿ ಮಾತನಾಡಿ, ಹನಮಸಾಗರದಲ್ಲಿ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿ ಶಿಥಿಲಗೊಂಡಿದೆ ಎಂಬ ನೆಪದಲ್ಲಿ ಕುಷ್ಟಗಿ ಹತ್ತಿರದ ನೆರೆಬೆಂಚಿ ಅರಣ್ಯಕ್ಕೆ ಕಚೇರಿ ಸ್ಥಳಾಂತರಗೊಳಿಸಿರುವುದು ಖಂಡನೀಯ. ಹನಮಸಾಗರ ಹಾಗೂ ಹನಮನಾಳ ಹೋಬಳಿಯಲ್ಲಿ ಅತೀ ಹೆಚ್ಚು ಪಂಪ್‌ಸೆಟ್ ಹೊಂದಿದ ರೇಷ್ಮೆ ಕೃಷಿಯನ್ನು ಬೆಳೆದು ಆರ್ಥಿಕವಾಗಿ ಸದೃಢವಾಗುತ್ತಿರುವ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದೇ ಇರುವುದರಿಂದ ತಮ್ಮ ಸ್ವ ಹಿತಾಸಕ್ತಿಗಾಗಿ ಕಚೇರಿ ಸ್ಥಳಾಂತರಿಸಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಇತ್ತೀಚಿಗೆ ನಡೆದ ಅಲ್ಪಸಂಖ್ಯಾತರ 15 ಅಂಶಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸ್ಥಳಾಂತರಿಸಬಾರದು ಎಂದು ಹೇಳಿದ್ದರೂ ಸಹಿತ ಅವರ ಆದೇಶಕ್ಕೆ ಕಿಮ್ಮತ್ತಿಲ್ಲದೇ ಕಚೇರಿಯನ್ನು ನೆರೆಬೆಂಚಿಗೆ ಸ್ಥಳಾಂತರಗೊಳಿಸಿದ್ದಾರೆ. ಇದರಿಂದ ಆ ಭಾಗದ ರೈತರಿಗೆ ಅನಾನುಕೂಲವಾಗಲಿದ್ದು ಈ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಹೇಳಿದರು.ಕುಷ್ಟಗಿಯ ಪಶು ಸಂಗೋಪನಾ ಇಲಾಖೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದೆ ಹಾಗೂ ಇಲ್ಲಿನ ಸಹಾಯಕ ನಿರ್ದೇಶಕರು ಕಚೇರಿಗೆ ಸಕಾಲಕ್ಕೆ ಬರುವುದಿಲ್ಲ ಹಾಗೂ ಪಶುಗಳಿಗೆ ಚಿಕಿತ್ಸೆ ಕೊಡಬೇಕೆಂಬ ನಿಯಮವಿದ್ದರೂ ಸಹಿತ ಚಿಕಿತ್ಸೆ ನೀಡುತ್ತಿಲ್ಲ. ಕೇವಲ ಡಿ-ದರ್ಜೆ ನೌಕರರು ಮಾತ್ರ ಚಿಕಿತ್ಸೆ ಕೊಡುತ್ತಿರುವುದು ಕಂಡು ಬರುತ್ತಿದ್ದು, ಚರ್ಮಗಂಟು ರೋಗ ಕುಷ್ಟಗಿ ತಾಲೂಕಿಗೆ ಎರಡ್ಮೂರು ಸಲ ಬಂದಿದ್ದು ಔಷಧಿಗಳನ್ನು ಸಮರ್ಪಕವಾಗಿ ರೈತರಿಗೆ ವಿತರಿಸುತ್ತಿಲ್ಲ ಈ ಕುರಿತು ತನಿಖೆ ಕೈಗೊಳ್ಳಬೇಕು ಎಂದರು.
ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನಾದ್ಯಾಂತ ಸಾವಿರಾರು ಕೋಟಿ ಖರ್ಚು ಮಾಡಿ ಕೆರೆ ತುಂಬಿಸುವ ಯೋಜನೆ ಜಾರಿಯಲ್ಲಿದ್ದು ತಾಂತ್ರಿಕ ಸಮಸ್ಯೆಯನ್ನಿಟ್ಟುಕೊಂಡು ಕೆರೆ ತುಂಬಿಸುವುದನ್ನು 15 ದಿನಗಳಿಂದ ಸ್ಥಗಿತಗೊಳಿಸಿದ್ದಾರೆ. ತಕ್ಷಣ ಮರುಚಾಲನೆ ನೀಡಬೇಕು ಎಂದು ತಿಳಿಸಿದರು.ಇತ್ತೀಚಿಗೆ ಬೀಸಿದ ಗಾಳಿ-ಮಳೆಗೆ ಕೃಷಿ ಮತ್ತು ತೋಟಗಾರಿಕಾ ಬೆಳೆ ಧರೆಗುರುಳಿವೆ. ಕೆಲವೆಡೆ ಜಲಾವೃತಗೊಂಡಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ರೈತರಿಗೆ ಪರಿಹಾರ ದೊರೆತಿಲ್ಲ. ಆಗಸ್ಟ್‌ನಲ್ಲಿ ನೆರೆಹಾವಳಿಯಿಂದ ತುತ್ತಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ತಾಪಂ ಇಒ ಪಂಪಾಪತಿ ಹಿರೇಮಠ, ಶರಣಪ್ಪ ಬೀಳಗಿ, ಶರಣಪ್ಪ ಬಾಚಲಾಪುರ, ವಿರೂಪಾಕ್ಷಗೌಡ ಗೊರೆಬಾಳ, ಪರಪ್ಪ ಮಡಿಯಪ್ಪನವರು, ದೇವಪ್ಪ ಮೆಣಸಗಿ ಸೇರಿದಂತೆ ಅನೇಕರು ಇದ್ದರು.