ಅತಿವೃಷ್ಟಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧ: ದಿವ್ಯಪ್ರಭು

KannadaprabhaNewsNetwork |  
Published : Aug 22, 2025, 01:01 AM IST
ಅಳ್ನಾವರದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಜನರಿಂದ ಅಹವಾಲು ಸ್ವೀಕರಿಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿಯಾಗಿರುವ ಬಗ್ಗೆ ಜಂಟಿ ಸಮಿಕ್ಷೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳು ಮತ್ತು ಜಾನುವಾರು ಪ್ರಾಣಹಾನಿಗಳಿಗೆ ಪರಿಹಾರ ನೀಡಲು ಕ್ರಮ ಕೈಕೊಳ್ಳಲಾಗುವುದು.

ಅಳ್ನಾವರ: ಇತ್ತೀಚಿನ ದಿನಗಳಲ್ಲಿ ಅತಿಯಾದ ಮಳೆಯಿಂದ ಹಾನಿಗೊಳಗಾದ ಸೇತುವೆ, ರಸ್ತೆಗಳ ದುರಸ್ತಿಗೆ ಆಯಾ ಇಲಾಖೆಗೆ ಸುಚಿಸಲಾಗಿದೆ. ಇನ್ನಿತರ ಅತಿವೃಷ್ಟಿ ತುರ್ತು ಪರಿಹಾರ ಕಾರ್ಯಗಳಿಗೆ ಬಳಕೆ ಮಾಡಲು ಪ್ರತಿ ತಾಲೂಕಿಗೆ ₹50 ಲಕ್ಷಗಳನ್ನು ತಹಸೀಲ್ದಾರ್‌ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಪ್ರಭು ತಿಳಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜನರಿಂದ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿಯಾಗಿರುವ ಬಗ್ಗೆ ಜಂಟಿ ಸಮಿಕ್ಷೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳು ಮತ್ತು ಜಾನುವಾರು ಪ್ರಾಣಹಾನಿಗಳಿಗೆ ಪರಿಹಾರ ನೀಡಲು ಕ್ರಮ ಕೈಕೊಳ್ಳಲಾಗುವುದು. ಪ್ರಕೃತಿ ವಿಕೋಪದಿಂದಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ತುರ್ತು ಸಹಾಯವಾಣಿ ಆರಂಭಿಸಲಾಗಿದೆ ಎಂದರು.

ಸಾರಿಗೆ ಅವ್ಯವಸ್ಥೆಯ ಬಗ್ಗೆ ಕಿವಡೆಬೈಲ ಮತ್ತು ದೊಪೆನಟ್ಟಿ ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಶಾಲಾ ಸಮಯಕ್ಕೆ ನಿಯಮಿತವಾಗಿ ಬಸ್‌ಗಳನ್ನು ಓಡಿಸಲು ಘಟಕ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಮುಂದಿನ ದಿನಗಳಲ್ಲಿ ಸಾರಿಗೆ ಸಮಸ್ಯೆ ಮುಂದುವರೆದರೆ ಗಮನಕ್ಕೆ ತರಲು ಗ್ರಾಮಸ್ಥರಿಗೆ ತಿಳಿಸಿದರು.

ಪಟ್ಟಣದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಸಮಸ್ಯೆ, ಅರವಟಗಿಯಲ್ಲಿ ಬಸ್ ತಂಗುದಾಣ ನಿರ್ಮಾಣ, ವಸತಿ ಯೋಜನೆಯಡಿ ನಿರ್ಮಿಸಿಕೊಂಡ ಮನೆಗೆ ಅನುದಾನ ಬಿಡುಗಡೆಯಾಗದಿರುವುದು, ಬೆಣಚಿ ಮುತ್ತಲಮುರಿ ನಡುವಿನ ಹಳ್ಳಕ್ಕೆ ಸೇತುವೆ ನಿರ್ಮಾಣ, ಸರ್ಕಾರಿ ಜಾಗೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನು ತೆರವುಗೊಳಿಸುವದು, ಅರವಟಗಿ- ಡೋರಿ- ಬೆಣಚಿ- ಅಳ್ನಾವರ ರಸ್ತೆಯ ಅಗಲಿಕರಣ ಸೇರಿದಂತೆ ಸುಮಾರು ಐವತ್ತಕ್ಕೂ ಅಧಿಕ ಅರ್ಜಿಗಳು ಸ್ವೀಕೃತವಾದವು.

ಪಟ್ಟಣದಲ್ಲಿರುವ ಸರಕಾರಿ ಶಾಲಾ ಮೈದಾನದಲ್ಲಿ ವರ್ಷದ ಆರೇಳು ತಿಂಗಳು ಕೊಳಚೆ ನೀರಿನಿಂದ ತುಂಬಿರುತ್ತಿದ್ದು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶೀಘ್ರ ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಸ್ಥಳಿಯ ಮುಖಂಡ ಪ್ರವೀಣ ಪವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ಪ್ರಶಾಂತ ತುರಕಾಣಿ, ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ಆರ್.ಎಫ್.ಒ ಶಕುಂತಲಾ, ಕೃಷಿ ಸಹಾಯಕ ನಿರ್ದೇಶಕ ರಾಜಶೇಖರ ಅಣ್ಣುಗೌಡರ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾಸೌಧ ನಿರ್ಮಾಣಕ್ಕೆ ಪರ-ವಿರೋಧ: ಜಿಲ್ಲಾಧಿಕಾರಿಗಳು ಆಯೋಜಿಸಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮದ ನಡುವೆಯೇ ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರಜಾಸೌಧ ಕಟ್ಟಡದ ಸ್ಥಳದ ಬಗ್ಗೆ ಪರ ವಿರೋಧಗಳ ಧ್ವನಿ ಜನರಿಂದ ಕೇಳಿಬಂದವು. ಒಂದು ಗುಂಪು ನಿಯೋಜಿತ ಸ್ಥಳದಲ್ಲಿಯೇ ಕಟ್ಟಡ ನಿರ್ಮಿಸುವಂತೆ ಪಪಂ ಅಧ್ಯಕ್ಷರನ್ನೊಳಗೊಂಡ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೆ, ಇನ್ನೊಂದು ಗುಂಪು ಕಟ್ಟಡ ನಿರ್ಮಾಣದ ನಿಯೋಜಿತ ಸ್ಥಳ ಸೂಕ್ತವಾಗಿರುವುದಿಲ್ಲ ಇದನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಇದರ ಜತೆಗೆ ತಾಲೂಕಿನ ಹಳ್ಳಿಗಳ ಅನೇಕ ಮುಖಂಡರು ಧ್ವನಿ ಗೂಡಿಸಿ ಜಾಗೆ ಬದಲಾವಣೆಗೆ ಬೆಂಬಲ ವ್ಯಕ್ತಪಡಿಸಿದ್ದು ಕಂಡು ಬಂದಿತು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು ಜನರ ಮನವಿಗಳ ಬಗ್ಗೆ ಚರ್ಚಿಸಿ ಸ್ಥಳ ಪರಿಶೀಲನೆ ಮಾಡಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ