ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ನೀಡಲು ಆಗ್ರಹ

KannadaprabhaNewsNetwork |  
Published : Aug 22, 2025, 01:01 AM IST
ಬೆಳೆಹಾನಿಗೆ ಪರಿಹಾರ ನೀಡುವಂತೆ ಭಾರತೀಯ ಕಿಸಾನ್ ಸಂಘದ ವತಿಯಿಂದ ಶಿರಹಟ್ಟಿಯಲ್ಲಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಮೆಕ್ಕೆಜೋಳ, ಬಿಟಿ ಹತ್ತಿ, ಶೇಂಗಾ, ಎಳ್ಳು, ಸೊಯಾಬಿನ್ ಸೇರಿದಂತೆ ಅನೇಕ ಬೆಳೆಗಳು ತೇವಾಂಶ ಹೆಚ್ಚಾಗಿ ಕೊಳೆಯುತ್ತಿವೆ

ಶಿರಹಟ್ಟಿ: ಆಗಸ್ಟ್‌ ತಿಂಗಳ ಎರಡನೇ ವಾರದಲ್ಲಿ ಬಿಟ್ಟು ಬಿಡದೇ ಮಳೆ ಸುರಿದಿದ್ದರಿಂದ ಹೆಸರು ಬೆಳೆ ಹಾಳಾಗಿದೆ. ಮೆಕ್ಕೆಜೋಳ ಕೂಡ ತೇವಾಂಶ ಹೆಚ್ಚಾಗಿ ಹಳದಿ ಬಣ್ಣಕ್ಕೆ ತಿರುಗಿ ಕೊಳೆಯುವ ಹಂತಕ್ಕೆ ಬಂದಿದೆ. ತಕ್ಷಣವೇ ಸರ್ಕಾರ ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ತಾಲೂಕಾಧ್ಯಕ್ಷ ಶಂಕರಗೌಡ ಪಾಟೀಲ, ರೈತ ಮುಖಂಡ ರಮೇಶ ಕೋಳಿವಾಡ ಮಾತನಾಡಿ, ತಾಲೂಕಿನಲ್ಲಿ ಈ ವರ್ಷ ಗುರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ೭೦ರಿಂದ ೮೦ ದಿವಸಗಳ ಅವಧಿಯ ಬೆಳೆಗಳು ಇದಾಗಿದೆ. ಆದರೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮೆಕ್ಕೆಜೋಳ, ಬಿಟಿ ಹತ್ತಿ, ಶೇಂಗಾ, ಎಳ್ಳು, ಸೊಯಾಬಿನ್ ಸೇರಿದಂತೆ ಅನೇಕ ಬೆಳೆಗಳು ತೇವಾಂಶ ಹೆಚ್ಚಾಗಿ ಕೊಳೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಹೆಸರು ಧಾರಣೆ ಈ ಬಾರಿ ಮಾರುಕಟ್ಟೆಯಲ್ಲಿ ಉತ್ತಮವಾಗಿದ್ದು, ಇಂತಹ ಸಮಯದಲ್ಲಿ ಬೆಳೆ ಕೈಗೆ ಸಿಗುತ್ತಿಲ್ಲ. ಫಸಲು ನೀರಿನಲ್ಲಿ ನಿಂತು ಕೊಳೆತು ಹೋಗುತ್ತಿದೆ. ಮಳೆ ನಿಂತ ಮೇಲೆ ಒಕ್ಕಲಿ ಮಾಡಿಕೊಂಡರೂ ಗುಣಮಟ್ಟದ ಹೆಸರು ಬರುವುದಿಲ್ಲ. ಇದಕ್ಕೆ ಬೆಲೆ ಕೂಡ ಸಿಗುವುದಿಲ್ಲ. ಬೀಜ, ಗೊಬ್ಬರ, ಕಳೆ ಸೇರಿ ಖರ್ಚು ಮಾಡಿದ ಹಣವೂ ರೈತರಿಗೆ ಬರುವುದಿಲ್ಲ. ಸರ್ಕಾರ ರೈತರ ಗೋಳು ಗಮನಿಸಿ ತುರ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಿಸಾನ್ ಜಾಗೃತಿ ವಿಕಾಸ ಸಂಘದ ಅಧ್ಯಕ್ಷ ಸಂಜೀವ ಹುಡೇದ್, ರೈತ ಮುಖಂಡ ಚನ್ನಪ್ಪ ಷಣ್ಮುಖಿ ಮಾತನಾಡಿ, ೧೫ ದಿನಗಳಿಂದ ತಾಲೂಕಿನಾದ್ಯಂತ ಸತತ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತಿದ ಎಲ್ಲ ಬೆಳೆಗಳು ಹಾಳಾಗಿವೆ. ಬಿತ್ತನೆ ಬೀಜ, ಗೊಬ್ಬರ ಹಾಕಿ ಬೆಳೆದ ಎಲ್ಲ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಸರ್ಕಾರ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ವಿಜಯಕುಮಾರ ಅಡವಿ, ವೀರನಗೌಡ ಪಾಟೀಲ, ಅವರೆಡ್ಡಿ ಗುತ್ತಲ, ಚನ್ನಬಸಪ್ಪ ಹಾವೇರಿ, ಮಲ್ಲಿಕಾರ್ಜುನ ಪಾಟೀಲ, ಶಿವಲಿಂಗಪ್ಪ ಕೋಡಿ, ಶಿವಪ್ಪ ಹತ್ತಿಕಾಳ, ಸಂಗಪ್ಪ ನಂದಗಾವಿ, ರಾಮನಗೌಡ ಪಾಟೀಲ, ಚಂದ್ರಶೇಖರ ಬೂದಿಹಾಳ, ಅಶೋಕ ಮುಳಗುಂದ, ಬಸವರಾಜ ಮಲಿಗೋಡ ಮುಂತಾದವರು ಉಪಸ್ಥಿತರಿದ್ದರು.

ತಹಸೀಲ್ದಾರ್‌ ಕಾರ್ಯಾಲಯದ ಸಿಬ್ಬಂದಿ ಸಂತೋಷ ಅಸ್ಕಿ ಮನವಿ ಸ್ವೀಕರಿಸಿದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ