ಲಕ್ಷ್ಮೇಶ್ವರ: ಜಿಲ್ಲೆಯಲ್ಲಿ ಪಿಓಪಿ ಗಣೇಶ ಮೂರ್ತಿ ಮಾರಾಟಕ್ಕೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪರಿಸರ ಇಲಾಖೆ ಅಧಿಕಾರಿಗಳು ಗುರುವಾರ ಪಟ್ಟಣದಲ್ಲಿ ಗಣೇಶ ಮೂರ್ತಿ ತಯಾರಿಸುವ ಅನೇಕ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸುಮಾರು ೩೫-೪೦ ಪಿಓಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯ ಸರ್ಕಾರ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟಕ್ಕೆ ಪರವಾನಗಿ ನೀಡಿದ್ದು, ಕೆಲವೊಂದು ಕಡೆ ಪಿಓಪಿ ಗಣೇಶ ಮೂರ್ತಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಯೋಜನಾ ಸಹಾಯಕ ವಿಕಾಸ ಪಟ್ಟಣಶೆಟ್ಟಿ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುರುವಾರ ಪಟ್ಟಣದ ಹಾವಳಿ ಹನಮಂತ ದೇವಸ್ಥಾನ, ಪಂಪ ಸರ್ಕಲ್, ಕುಂಬಾರ ಓಣಿ ಸೇರಿದಂತೆ ಪಟ್ಟಣದಲ್ಲಿ ಗಣೇಶ ಮೂರ್ತಿ ತಯಾರಕರ ಮಳಿಗೆಗಳಿಗೆ ಭೇಟಿ ನೀಡಿ ಒಟ್ಟು ೩೫ ರಿಂದ ೪೦ಕ್ಕೂ ಅಧಿಕ ಮೂರ್ತಿ ಗುರುತಿಸಿ ಜಪ್ತಿ ಮಾಡಲಾಯಿತು.ಈ ವೇಳೆ ಕೆಲವು ಗಣೇಶನ ಮೂರ್ತಿ ತಯಾರಕರು ತಕರಾರು ತೆಗೆದು ಪಿಓಪಿ ಗಣೇಶನ ಮೂರ್ತಿ ತಯಾರಿಸುವುದು ಮಾರಾಟ ಮಾಡುವದನ್ನು ನಿಷೇಧಿಸಿದ್ದು, ಇದೀಗ ಕ್ರಮಕ್ಕೆ ಮುಂದಾಗಿರುವುದು ಯಾಕೆ ಎಂದು ಪ್ರಶ್ನಿಸಿ ೧-೨ ತಿಂಗಳ ಮೊದಲೆ ಪಿಓಪಿ ಮಾರಾಟಕ್ಕೆ ನಿಷೇಧ ಮಾಡಲಾಗಿರುವದನ್ನು ಪ್ರಕಟಿಸಬಹುದಾಗಿತ್ತು, ಹೀಗೆ ಏಕಾಏಕಿ ಗಣೇಶನ ಮೂರ್ತಿ ವಶಕ್ಕೆ ಪಡೆದುಕೊಳ್ಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಯೋಜನಾ ಸಹಾಯಕ ವಿಕಾಸ ಪಟ್ಟಣಶೆಟ್ಟಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಿಓಪಿ ಗಣೇಶನ ಮೂರ್ತಿಗಳ ಮಾರಾಟ ನಿಷೇಧಿಸಿದ್ದು, ಈ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದಲ್ಲಿ ಮಾರಾಟಕ್ಕೆಇರುವ ಗಣೇಶನ ಮೂರ್ತಿ ಪರಿಶೀಲಿಸಲಾಗಿ ಸುಮಾರು ೩೫-೪೦ಕ್ಕೂ ಅಧಿಕ ಮೂರ್ತಿಗಳು ಪಿಓಪಿ ಹಾಗೂ ರೇಡ್ ಆಕ್ಸೆೈಡ್ ಮಿಶ್ರಿತ ಒಳಗಡೆ ಪಿಓಪಿ ಇರುವ ಮೂರ್ತಿಗಳು ಕಂಡು ಬಂದಿದ್ದು, ಆದ್ದರಿಂದ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅವುಗಳನ್ನು ಪುರಸಭೆಯ ಗೋಡಾನ್‌ನಲ್ಲಿ ಇಡಲಾಗುವದು, ಮುಂದಿನ ಆದೇಶದಂತೆ ಅವುಗಳ ಬಗ್ಗೆ ಕ್ರಮ ವಹಿಸಲಾಗುವದು. ಅಲ್ಲದೆ ಮತ್ತೆ ಅಂತಹ ಗಣೇಶನ ಮೂರ್ತಿಗಳು ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.ಈ ವೇಳೆ ಪುರಸಭೆ ಕಂದಾಯ ನಿರೀಕ್ಷಕ, ಗದಗ ಜಿಲ್ಲಾ ಮಣ್ಣಿನ ಮೂರ್ತಿ ತಯಾರಕರ ಸಂಘದ ಅಧ್ಯಕ್ಷ ಮುತ್ತಣ್ಣ ಭರಡಿ ಹಾಗೂ ಪುರಸಭೆ ಪೌರ ಕಾರ್ಮಿಕರು ಇದ್ದರು.