ಬ್ಯಾಡಗಿ: ತಾಲೂಕಿನ ಶಿಡೇನೂರು ಕೆರೂಡಿ ಹಾಗೂ ತಡಸ ಗ್ರಾಮಗಳಲ್ಲಿ ಶುಕ್ರವಾರ ಕಾಡುಹಂದಿಗಳ(ಮಿಕ) ದಾಳಿಗೆ ಕಟಾವಿಗೆ ಬಂದಿದ್ದ ಸುಮಾರು 50 ಎಕರೆಯಷ್ಟು ಗೋವಿನಜೋಳದ ಬೆಳೆ ನಾಶವಾಗಿದೆ. ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ರೈತ ಮುಖಂಡ ಕಿರಣಕುಮಾರ ಗಡಿಗೋಳ, ಕಾಡುಪ್ರಾಣಿಗಳ ಹಾವಳಿಗೆ ರೈತರ ಬೆಳೆಗಳನ್ನು ಕಳೆದುಕೊಂಡು ಹೈರಾಣಾಗುತ್ತಿರುವ ವಿಷಯ ಹೊಸದೇನಲ್ಲ. ಕೃಷ್ಣಮೃಗ, ಆನೆ, ಚಿರತೆ, ಸೈನಿಕಹುಳು ಸೇರಿದಂತೆ ಇನ್ನಿತರ ಜೀವಸಂಕುಲಗಳ ಕಾಟಕ್ಕೆ ರೈತರು ಕೃಷಿಯನ್ನೇ ಬಿಟ್ಟು ಹೋಗುತ್ತಿರುವ ಪ್ರಕರಣಗಳು ನಿತ್ಯ ಒಂದಿಲ್ಲೊಂದು ಕಡೆ ನಡೆಯುತ್ತಿವೆ. ಇದೀಗ ಕಾಡುಹಂದಿಗಳ ದಾಳಿಗೆ ಸುಮಾರು 50 ಎಕರೆಯಷ್ಟು ಗೋವಿನಜೋಳ ನಾಶವಾಗಿದ್ದು, ಕೂಡಲೇ ಹಂದಿಗಳನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಆಗ್ರಹಿಸಿದರು.ಪರಮೇಶ ವಡ್ಡರ ಮಾತನಾಡಿ, ಕಾಡುಪ್ರಾಣಿಗಳ ದಾಳಿಗೆ ತುತ್ತಾಗುವ ರೈತರಿಗೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ ಕೇವಲ ₹2250 ಪರಿಹಾರ ನೀಡುತ್ತಿದೆ. ಇದರಿಂದ ಸಂತ್ರಸ್ತ ರೈತರನ್ನು ಆರ್ಥಿಕ ಸಂಕಷ್ಟದಿಂದ ಹೊರತರಲು ಸಾಧ್ಯವಿಲ್ಲ. ಕೂಡಲೇ ಕಾಡುಹಂದಿಗಳ ಬಂಧಿಸುವ ಕೆಲಸವಾಗಬೇಕು. ಇಲ್ಲದೇ ಹೋದಲ್ಲಿ ಅರಣ್ಯ ಇಲಾಖೆಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅರಣ್ಯ ಇಲಾಖೆಯ ಅಧಿಕಾರಿ ಗಿರಿಧರ ಮಾತನಾಡಿ, ಕಾಡುಹಂದಿ ನೋಡಲು ಇತರೆ ಹಂದಿಗಳಂತೆ ಕಂಡರೂ ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಗೋವಿನಜೋಳದ ಬೇರಿನಲ್ಲಿರುವ ಸಿಹಿಯಾದ ಪದಾರ್ಥ ಇಷ್ಟವಾಗುತ್ತದೆ. ಹೀಗಾಗಿ ಗೋವಿನಜೋಳ ಬುಡದಲ್ಲಿನ ಸಿಹಿಯಾದ ಪದಾರ್ಥ ತಿನ್ನಲು ದಾಳಿ ನಡೆಸುತ್ತಿವೆ. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಕಾಡುಹಂದಿಗಳನ್ನು ಸೆರೆ ಹಿಡಿಯಲು ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದರು.