ಗಜೇಂದ್ರಗಡ: ಸರ್ಕಾರಿ ಜಾರಿಗೆ ತರಲು ಹೊರಟಿರುವ ಒಳಮೀಸಲಾತಿ ವರದಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಇಲ್ಲಿನ ಕೆಕೆ ವೃತ್ತದಲ್ಲಿ ಗುರುವಾರ ಪಟ್ಟಣದಲ್ಲಿ ಬೋವಿ, ಲಂಬಾಣಿ, ಕೊರಮ ಹಾಗೂ ಭಜಂತ್ರಿ ಸಮುದಾಯಗಳ ಮುಖಂಡರು ಪ್ರತಿಭಟನೆ ನಡೆಸಿದರು.
ನಮ್ಮ ಸಮಾಜದ ಜನರಿಗೆ ಮನೆ ಕಟ್ಟಿದ ಜಾಗದ ಉತಾರ ಈ ವರೆಗೆ ನೀಡಿಲ್ಲ. ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಉತಾರ ಇಲ್ಲ. ರೈತಪರ ಎನ್ನುವ ಸರ್ಕಾರ, ಸಾಗುವಳಿ ಮಾಡುವ ರೈತರಿಗೆ ಉತಾರ ನೀಡಬೇಕು. ಮೀಸಲಾತಿಯ ವಿಷಯದಲ್ಲಿ ನಮಗೆ ಅನ್ಯಾಯ ಮಾಡಲಾಗುತ್ತಿದೆ. ಹೆಣ ಇಟ್ಟುಕೊಂಡು ಕುಳಿತಿದ್ದೇವೆ. ಹೆಣವನ್ನು ಎಲ್ಲಿ ಸುಡಬೇಕು ಎನ್ನುವ ವಿಚಾರ ಮಾಡಬೇಕಿದೆ. ನಿಮ್ಮ ಊರಿಗೆ ಎಂಎಲ್‌ಎ ಬರಲು ಕೊಡಬೇಡಿ, ವಿಶೇಷವಾಗಿ ನಮ್ಮ ಸಮುದಾಯದ ಶಾಸಕರು ಬರಲು ಕೊಡಬೇಡಿ. ಮೀಸಲಾತಿ ವಿಷಯದಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಬೇಕಿದೆ ಎಂದರು.
ಇದಕ್ಕೂ ಮುನ್ನ ಪಟ್ಟಣದ ಹಿರೇದುರ್ಗಾದೇವಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪುರಸಭೆ, ಮೈಸೂರುಮಠ, ದುರ್ಗಾ ವೃತ್ತ, ಅಂಬೇಡ್ಕರ್ ವೃತ್ತ, ಜೋಡು ರಸ್ತೆ ಮಾರ್ಗವಾಗಿ ಕಾಲಕಾಲೇಶ್ವರ ವೃತ್ತ ತಲುಪಿ, ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು. ಮೆರವಣಿಗೆಯ ಉದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.ತಹಸೀಲ್ದಾರ್ ಮೂಲಕ ಕಾನೂನು ಸಚಿವರು, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ನೀಡಿದರು.
ನಾಗಮೋಹನ ದಾಸ್ ವರದಿಯಲ್ಲಿ ೫ ವರ್ಗೀಕರಣ ಮಾಡಿದ್ದರು. ಆದರೆ ಸರ್ಕಾರವು ೩ ವರ್ಗೀಕರಣ ಮಾಡಿದೆ. ಇದರ ಹಿಂದಿನ ಉದ್ದೇಶವೇನು ಎಂಬುದು ಸ್ಪಷವಾಗಬೇಕಿದೆ. ಅಲ್ಲದೆ ವಿಪಕ್ಷಗಳಿಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಹೀಗಾಗಿ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖಂಡ ಆರ್.ಕೆ. ಚವ್ಹಾಣ ಹೇಳಿದರು.