ಹಾವೇರಿ: ಸಮೀಕ್ಷೆಗೆ ಸಿದ್ಧಪಡಿಸಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಎಸ್ಸಿ ಕ್ರೈಸ್ತ ಜಾತಿಗಳನ್ನು ಸರ್ಕಾರ ಕೂಡಲೇ ಕೈಬಿಡದಿದ್ದರೆ ದಲಿತರು ಬೀದಿಗಿಳಿದು ಹೋರಾಟ ಮಾಡಬೇಕಾತ್ತದೆ ಎಂದು ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಎಚ್ಚರಿಕೆ ನೀಡಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜಾತಿಗಣತಿಯಲ್ಲಿ ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಎಂದು ಉಪ ಪಂಗಡಗಳನ್ನು ಅವೈಜ್ಞಾನಿಕವಾಗಿ ವಿಭಾಗಿಸಿ ಹಿಂದು ಸಮಾಜವನ್ನು ವೋಟ್ ಬ್ಯಾಂಕ್‌ಗೋಸ್ಕರ ಒಕ್ಕಲೆಬ್ಬಿಸಲಾಗುತ್ತಿದೆ. ರಾಜ್ಯ ಸರಕಾರಕ್ಕೆ ಜಾತಿ ಜನಗಣತಿ ಮಾಡುವ ಯಾವುದೇ ಅಧಿಕೃತ ಮಾನ್ಯತೆಯೇ ಇಲ್ಲ. ಎಲ್ಲ ಗಣತಿ ಮಾಡುವ ಅಧಿಕಾರ ಕೇಂದ್ರಕ್ಕೆ ಮಾತ್ರವಿದೆ ಎಂದರು. ಈ ಹಿಂದೆ ಸದಾಶಿವ ಆಯೋಗ 101 ಪರಿಶಿಷ್ಟ ಜಾತಿ ಸಮೀಕ್ಷೆ ಮಾಡುವಾಗ 240 ಕೋಟಿ ರು., ಕಾಂತರಾಜ ಆಯೋಗದ ಅವಧಿಯಲ್ಲಿ 160 ಕೋಟಿ, ನಾಗಮೋಹನದಾಸ ಆಯೋಗದ ವರದಿಗೆ 180 ಕೋಟಿ ರು. ಹೀಗೆ ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಗೊಂದಲ ಸೃಷ್ಟಿಸುವ ಕುತಂತ್ರವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಈ ಹಿಂದೆ ಇದ್ದ ಮೂಲ ಜಾತಿಗಳನ್ನು ಮಾತ್ರ ಸಮೀಕ್ಷೆ ಮಾಡಬೇಕು, ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿಂದೂ ಎಂದೇ ನಮೂದಿಸಿ: ಜಾತಿಗಣತಿ ಸಮೀಕ್ಷೆ ಮಾಡಲು ಬರುವ ಪೂರ್ವದಲ್ಲಿ ಸಾರ್ವಜನಿಕರು, ಮಠಾಧೀಶರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಪೂರ್ವಭಾವಿ ಸಭೆ ನಡೆಸಿ, ಜಾತಿಗಣತಿಗೆ ಮಾಹಿತಿ ನೀಡಬೇಕು. ಧರ್ಮ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಅವರವರ ಜಾತಿಗನುಗುಣವಾಗಿ ಜಾತಿ, ಉಪ ಜಾತಿಗಳನ್ನು ಬರೆಸಬೇಕೆಂದು ತಿಳಿಸಿದರು. ಹೆಚ್ಚುವರಿ ಕ್ರಿಶ್ಚಿಯನ್ ಉಪಜಾತಿಗಳನ್ನು ಯಾವುದೇ ಕಾರಣಕ್ಕೂ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿದರು.ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಮಾತನಾಡಿ, ಕೇಂದ್ರ ಸರ್ಕಾರ ಸರಕು ಮತ್ತು ಸೇವೆಗಳ ಮೇಲೆ ವಿಧಿಸಿದ್ದ ಜಿಎಸ್‌ಟಿ ಹೊರೆಯನ್ನು ಇಳಿಕೆ ಮಾಡಿರುವುದು ಮಧ್ಯಮ ವರ್ಗದ ಜನರು, ಬಡವರು, ವ್ಯಾಪಾರಸ್ಥರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆ ತಿಳಿಸುವುದಾಗಿ ಹೇಳಿದರು.ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಚಂದ್ರಪ್ಪ ಹರಿಜನ ಮಾತನಾಡಿದರು. ಮುಖಂಡರಾದ ಗಿರೀಶ ತುಪ್ಪದ, ಬಸವರಾಜ ಕಳಸೂರ, ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಶ್ರೀಕಾಂತ ಸಣ್ಣಮನಿ, ಶಿವಯೋಗಿ ಹುಲಿಕಂತಿಮಠ, ಮೃತ್ಯುಂಜಯ ಮುಷ್ಠಿ ಇದ್ದರು.