ಮಂಗಳೂರು : ಬೆಳಗಾವಿ ಅಧಿವೇಶನ ಆರಂಭವಾಗುವ ಡಿ.9ರವರೆಗೆ ಆಡಳಿತ- ವಿರೋಧ ಪಕ್ಷದವರು ಎಷ್ಟು ಬೇಕಾದರೂ ಜಗಳವಾಡಿ. ಆದರೆ ಸದನದ ಒಳಗೆ ಜಗಳ, ತಿಕ್ಕಾಟ ಮಾಡಬೇಡಿ. ಜನರ ಹಿತದೃಷ್ಟಿ, ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಿ.. ಶಾಸಕರಿಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಫರೀದ್ ಸಲಹೆ ಇದು. ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.9ರಿಂದ 19ರವರೆಗೆ ಬೆಳಗಾವಿ ಅಧಿವೇಶನ ನಡೆಯಲಿದೆ. ಆಡಳಿತ ಮತ್ತು ವಿರೋಧ ಪಕ್ಷದವರ ನಡುವಿನ ತಿಕ್ಕಾಟ ಪ್ರಜಾಪ್ರಭುತ್ವದ ಸೌಂದರ್ಯ. ಡಿ.9ರವರೆಗೆ ಎಷ್ಟು ಬೇಕಾದರೂ ತಿಕ್ಕಾಟ ಮಾಡಲಿ, ಅದರ ಬಳಿಕ ನಡೆಯುವ ಅಧಿವೇಶನದಲ್ಲಿ ರಾಜ್ಯದ, ಅದರಲ್ಲೂ ಉತ್ತರ ಕರ್ನಾಟಕದ ಅಭಿವೃದ್ಧಿಯ ಚರ್ಚೆ ಮಾಡಲಿ ಎಂದು ಹೇಳಿದರು.
ವಕ್ಫ್ ಸೇರಿದಂತೆ ವಿವಿಧ ವಿವಾದಿತ ವಿಚಾರಗಳ ಚರ್ಚೆಗೆ ಅವಕಾಶ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ನಿಯಮಾನುಸಾರ ಏನೆಲ್ಲ ಅವಕಾಶ ನೀಡಬೇಕೋ ಅದನ್ನು ನೀಡುತ್ತೇನೆ. ಅದು ನನ್ನ ಜವಾಬ್ದಾರಿ ಎಂದರು.
ಅನುದಾನ ಬರಲ್ಲ, ತಗೋಬೇಕು: ಉಳ್ಳಾಲ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದ ರಸ್ತೆ ಅಭಿವೃದ್ಧಿಗೆ ತಲಾ 1 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಉಳ್ಳಾಲದ ರಸ್ತೆಗಳ ಅಭಿವೃದ್ಧಿಗೆ ಒಟ್ಟು 100 ಕೋಟಿ ರು. ಬಿಡುಗಡೆಯಾಗಿದೆ. ಶಾಸಕರ ಬಳಿ ಅನುದಾನ ತಾನಾಗೇ ಬರಲ್ಲ. ನಾವು ಅದನ್ನು ಪಡೆದುಕೊಳ್ಳಬೇಕು ಎಂದು ‘ಅನುದಾನ ಸಿಗುತ್ತಿಲ್ಲ’ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದರು.
ತೊಕ್ಕೊಟ್ಟಿನಲ್ಲಿ ಭೂಗತ ಕೇಬಲ್: ತೊಕ್ಕೊಟ್ಟಿನಲ್ಲಿ 33 ಕೆವಿ ಸಬ್ ಸ್ಟೇಶನ್‌ನಿಂದ 132 ಕೆವಿ ಸಬ್‌ಸ್ಟೇಶನ್‌ಗೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಈಗಾಗಲೇ ಅನುಮೋದನೆ ದೊರಕಿದ್ದು, ಶೀಘ್ರದಲ್ಲೇ ಉಳ್ಳಾಲ ನಗರಾದ್ಯಂತ ವಿದ್ಯುತ್ ಅಂಡರ್‌ಗ್ರೌಂಡ್ ಕೇಬಲ್ ಅಳವಡಿಕೆಯಾಗಲಿದೆ. ಇದು ಸಾಧ್ಯವಾದರೆ ಉಳ್ಳಾಲದಲ್ಲಿ ಯಾವುದೇ ಕೈಗಾರಿಕೆ, ಯಾವ ವಿದ್ಯುತ್ ಬೇಡಿಕೆಗೂ ಸಮಸ್ಯೆಯಾಗಲ್ಲ ಎಂದು ಖಾದರ್ ಹೇಳಿದರು.
ಸ್ಪೀಕರ್‌ಗೆ ಬೇಕು ಇನ್ನಷ್ಟು ಸವಲತ್ತು
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದಾಗ ಮಾತ್ರ ಸ್ಪೀಕರ್ ಹುದ್ದೆಗೆ ಡಿಮ್ಯಾಂಡ್ ಬರುತ್ತದೆ. ಯಾವಾಗಲೂ ಈ ಹುದ್ದೆಗೆ ಡಿಮ್ಯಾಂಡ್ ಬರಬೇಕಾದರೆ ಸ್ಪೀಕರ್‌ಗೆ ಇನ್ನಷ್ಟು ಸವಲತ್ತು ನೀಡಬೇಕು. ಸ್ಪೀಕರ್ ಹುದ್ದೆಯಲ್ಲಿದ್ದು ಕ್ಷೇತ್ರದಲ್ಲಿ ನೇರವಾಗಿ ಕೆಲಸ ಮಾಡಿಸಲು ಸಾಧ್ಯವಾಗಲ್ಲ. ಹಾಗಾಗಿ ಸ್ಪೀಕರ್ ಕ್ಷೇತ್ರಕ್ಕೆ ವಿಶೇಷ ಅನುದಾನ ಮೀಸಲಿರಿಸಬೇಕು ಎಂದು ಯು.ಟಿ. ಖಾದರ್ ಫರೀದ್ ಅಭಿಪ್ರಾಯಪಟ್ಟರು.