ಕನ್ನಡಪ್ರಭ ವಾರ್ತೆ ಶಹಾಪುರ
ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಭೀಮರಾಯನ ಗುಡಿಯ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ಆಡಳಿತ ಕಚೇರಿ ಹಾಗೂ ನಗರದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಧರಣಿ ಗುರುವಾರ 13ನೇ ದಿನಕ್ಕೆ ಕಾಲಿಟ್ಟಿದ್ದು, ನೀರು ಬಿಡುವ ವಿಚಾರವಾಗಿ ಸಚಿವ ದರ್ಶನಾಪುರ ಹಾಗೂ ಶಾಸಕ ಅಜಯ್‌ಸಿಂಗ್ ಅವರು ಸಿಎಂ ಭೇಟಿಯಾಗಿ ಚರ್ಚಿಸಿದ್ದಾರಾದರೂ ಅಧಿಕೃತ ಆದೇಶ ಬರುವವರೆಗೂ ಹೋರಾಟ ಮುಂದುವರಿಯುದಾಗಿ ರೈತ ಸಂಘಟನೆ ತಿಳಿಸಿದೆ.ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ ಮಾತನಾಡಿ, ಕಳೆದ 12 ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ನಮಗೆ ಅಧಿಕೃತ ಆದೇಶ ಬರುವವರಿಗೆ ಧರಣಿ ಹಿಂಪಡೆಯುವದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ, ರೈತರ ಪರಿಸ್ಥಿತಿ ಬಗ್ಗೆ ಗಮನಕ್ಕೆ ತರುವ ಮೂಲಕ ನೀರು ಹರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹಾಗೂ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮುಖ್ಯಮಂತ್ರಿ ಭೇಟಿಯಾಗಿ ರೈತರ ಸಮಸ್ಯೆ ತುಂಬಾ ಗಂಭೀರವಾಗಿದೆ. ನೀರು ಕೊಟ್ಟರೆ ರೈತರ ಬದುಕು ಸುಧಾರಿಸುತ್ತದೆ. ಎಸ್ಬಿ ಸಿ, ಎಂಬಿಸಿ ಹಾಗೂ ಜೆಬಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರೂ ಸಹ ಮನವಿ ಮಾಡಿದ್ದಾರೆ.ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ನಮ್ಮ ಹೋರಾಟ ನಿಂತಿದೆ. ನಮಗೆ ಇನ್ನೂ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ನೀರು ಹರಿಸುವವರಿಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶರಣು ಮಂದಾರವಾಡ, ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಮಹೇಶ್ ಗೌಡ ಸುಬೇದಾರ್, ಮಲ್ಲಣ್ಣ ಚಿಂತಿ, ಪ್ರಭು ಕೊಂಗಂಡಿ, ಮಲ್ಲಣ್ಣ ನೀಲಹಳ್ಳಿ, ಹಣಮಂತ ಕೊಂಗಂಡಿ, ಗುರಣ್ಣ ದೇಸಾಯಿ, ಸಿದ್ದಣ್ಣ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.ಬೆಳೆ ರಕ್ಷಣೆಗಾಗಿ ಕಾಲುವೆಗೆ ನೀರು ಹರಿಸಿ: ದರ್ಶನಾಪೂರ್ ಮನವಿ
ಶಹಾಪುರ ತಾಲೂಕಿನಲ್ಲಿ 16ರಿಂದ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಜೊತೆಗೆ ಶೇಂಗಾ, ತೊಗರಿ, ಹತ್ತಿ ಹಾಗೂ ಇತರೆ ಬೆಳೆಗಳಿವೆ. ಬೆಳೆ ಕೈ ಸೇರುವ ಸಮಯದಲ್ಲಿ ಮಳೆ ಅಭಾವದಿಂದ ಬೆಳೆಗಳು ಒಣಗಿ ಹಾಳಾಗುತ್ತಿವೆ.ಬೆಳೆದು ನಿಂತ ಬೆಳೆಗಳು ಕಣ್ಣೆದುರಿನಲ್ಲಿ ಹಾಳಾಗುತ್ತಿರುವುದನ್ನು ಕಂಡು ರೈತರು ಕಂಗಲಾಗಿದ್ದಾರೆ. ನಾರಾಯಣಪುರ ಡ್ಯಾಮಿನಿಂದ ನೀರು ಬಿಡುವಂತೆ ರೈತರು ಕೆಬಿಜೆನಲ್ ಆಡಳಿತ ಕಚೇರಿ ಮುಂದೆ ಪ್ರತಿನಿತ್ಯ ಧರಣಿ ನಡೆಸುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ 2024 ಜನವರಿ 1ರಿಂದ 5ನೇ ತಾರೀಖಿನವರೆಗೆ ಎಸ್ ಬಿ ಸಿ, ಎಂ ಬಿಸಿ ಹಾಗೂ ಜೆ ಬಿ ಸಿ ಕಾಲುವೆಗೆ ನೀರು ಹರಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇದೆ ವೇಳೆ ಜೇವರ್ಗಿ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಇದ್ದರು.