ವಸ್ತು ವಿನಿಮಯ ವೇಳೆ ಜಾಗರೂಕರಾಗಿರಿ । ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸಲಹೆ
ನಾವೆಲ್ಲರೂ ಹುಟ್ಟಿನಿಂದ ಸಾಯುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಗ್ರಾಹಕರಾಗಿರುತ್ತೇವೆ. ಆದ್ದರಿಂದ ನಾವು ಖರೀದಿಸುವ ವಸ್ತುಗಳ ಗುಣಮಟ್ಟ ಮತ್ತು ಸೇವೆಗಳ ಕುರಿತು ಜಾಗರೂಕರಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಹರಿಹರದ ಎಸ್.ಜೆ.ವಿ.ಪಿ ಕಾಲೇಜು ಸಭಾಂಗಣದಲ್ಲಿ ಗುರುವಾರ ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಒಂದು ವಸ್ತು ಕೊಟ್ಟು ಮತ್ತೊಂದು ವಸ್ತು ವಿನಿಮಯ ಮಾಡಿಕೊಳ್ಳುವ ಮೂಲಕ ಜೀವನ ಸಾಗಿಸುವ ವಿನಿಮಯ ಪದ್ಧತಿಯಿತ್ತು. ಆದರೆ ನಾಗರಿಕತೆ ಬದಲಾದಂತೆ ಪ್ರಚಲಿತ ಯುಗದಲ್ಲಿ ಪ್ರತಿಯೊಬ್ಬರೂ ಆನ್‌ಲೈನ್ ಮೂಲಕ ಡಿಜಿಟಲ್ ಪಾವತಿ ಮಾಡಿ ಅಗತ್ಯವಿರುವ ವಸ್ತು, ಪದಾರ್ಥ ಅಥವಾ ಸೇವೆಗಳನ್ನು ಪಡೆಯುತ್ತಿದ್ದಾರೆ.ಗ್ರಾಹಕರಾದ ಪ್ರತಿಯೊಬ್ಬರೂ ಖರೀದಿಸುವ ವಸ್ತುಗಳ ಗುಣಮಟ್ಟದಲ್ಲಿ ವ್ಯತ್ಯಾಸವಾದಾಗ, ಗ್ರಾಹಕ ಮೋಸಕ್ಕೆ ಒಳಗಾಗುತ್ತಾನೆ. ಆದ್ದರಿಂದ ಗ್ರಾಹಕರು ಮೋಸದ ಬಗ್ಗೆ ಅಸಡ್ಡೆ ತೋರದೆ ಜಾಗರೂಕರಾಗಿ ಕಾನೂನಿನ ಅಡಿ ವಂಚಿಸಿದವರಿಗೆ ಶಿಕ್ಷೆಗೆ ಒಳಪಡಿಸಲು ಮುಂದಾದಾಗ ಇಂತಹ ಮೋಸಗಳು ಮರುಕಳಿಸಲ್ಲ. ಅಲ್ಲದೆ ಡಿಜಿಟಲ್ ಪಾವತಿಯ ಈ ಕಾಲದಲ್ಲಿ ಮೊಬೈಲ್‌ಗಳಿಗೆ ಬರುವ ಒಟಿಪಿ, ಆಧಾರ್ ನಂಬರ್, ಬ್ಯಾಂಕ್‌ಗೆ ಅಥವಾ ಇನ್ನಿತರೆ ಯಾವುದೇ ದಾಖಲೆಗಳಿಗೆ ಸಂಬಂಧಿಸಿದ ಮಾಹಿತಿ ಕಳುಹಿಸಲು ಆನ್‌ಲೈನ್ ಮೂಲಕ ಸಂದೇಶಗಳು ಬಂದರೆ, ಸಾರ್ವಜನಿಕರು ಇವುಗಳಿಗೆ ಮಾರುಹೋದಲ್ಲಿ ವಂಚನೆಗಳಿಗೆ ಒಳಗಾಗಬೇಕಾಗುತ್ತದೆ. ಯಾವುದೇ ಬ್ಯಾಂಕ್‌ಗಳು ಗ್ರಾಹಕರಿಗೆ ಕರೆ ಮಾಡಿ ನಿಮ್ಮ ಒಟಿಪಿ, ಆಧಾರ್ ವಿವರ ಹೇಳಲು ತಿಳಿಸುವುದಿಲ್ಲ. ಆದ್ದರಿಂದ ವಂಚನೆ ಜಾಲದ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ಗ್ರಾಹಕರ ಜಾಗೃತಿಗಾಗಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರಿಗೆ ಮೋಸ, ವಂಚನೆ ಮತ್ತು ಅನುಕೂಲತೆಗಳ ಮರೀಚಿಕೆ ಮಾಡುವ ಪ್ರಯತ್ನಗಳು ಮಾರಾಟಗಾರರಿಂದ ಸಂಭವಿಸುತ್ತವೆ. ಆದ್ದರಿಂದ ಗ್ರಾಹಕರ ರಕ್ಷಣೆ ಅತ್ಯವಶ್ಯಕ. ಗ್ರಾಹಕರಿಗೆ ವಸ್ತುಗಳ ಖರೀದಿಸುವಿಕೆಗೆ ಯಾವುದೇ ರೀತಿ ಸಮಸ್ಯೆಯಾಗುತ್ತಿದ್ದರೆ ಸಂಬಂಧಪಟ್ಟ ಇಲಾಖೆಯವರು ಗ್ರಾಹಕರಿಗೆ ಬೆಂಬಲ ನೀಡಿ ಸೂಕ್ತ ನ್ಯಾಯ ಒದಗಿಸಲು ಮುಂದಾಗಬೇಕು.
ಮಹಾವೀರ ಮ.ಕರೆಣ್ಣವರ, ಹಿರಿಯ ಸಿವಿಲ್ ನ್ಯಾಯಾಧೀಶ