ಕೋವಿಡ್ ಎದುರಿಸಲು ಆಸ್ಪತ್ರೆಗಳು ಸಜ್ಜು : ಡಾ. ನಾಯಕ

KannadaprabhaNewsNetwork |  
Published : Dec 29, 2023, 01:32 AM IST
ಸುರಪುರ ನಗರದ ಸರಕಾರಿ ಆಸ್ಪತ್ರೆಯ್ಲಲಿ ಕೋವಿಡ್ ಎದುರಿಸಲು ಅಗತ್ಯ ಕ್ರಮ ಮತ್ತು ಬೆಡ್‌ಗಳನ್ನು ಸಿದ್ಧತೆಯಲ್ಲಿ ಇಟ್ಟಿರುವುದನ್ನು ಡಾ. ಆರ್.ವಿ. ನಾಯಕ ಪರಿಶೀಲಿಸಿದರು. | Kannada Prabha

ಸಾರಾಂಶ

ಕೋವಿಡ್‌ ರೂಪಾಂತರಿ ಜೆಎನ್‌-1 ರೂಪಾಂತ ತಳಿ ಹೆಚ್ಚಳ ಹಿನ್ನಲೆಯಲ್ಲಿ ಸೂಕ್ತ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆ

ಕನ್ನಡಪ್ರಭ ವಾರ್ತೆ ಸುರಪುರ

ಮಹಾಮಾರಿ ಕೋವಿಡ್ ಜೆಎನ್-1 ರೂಪಾಂತರ ತಳಿ ಎದುರಿಸಲು ಸುರಪುರ ಮತ್ತು ಹುಣಸಗಿ ತಾಲೂಕಿನ ಎಲ್ಲ ಆಸ್ಪತ್ರೆಗಳು ಸರ್ವ ಸನ್ನದ್ಧವಾಗಿವೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ನಾಯಕ್‌ ಹೇಳಿದರು.

ನಗರದ ತಾಲೂಕು ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ನಡೆದ ಖಾಸಗಿ ವೈದ್ಯರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೆಡೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ತೀವ್ರ ಶೀತ (ನೆಗಡಿ), ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಎದುರಾದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ರೋಗಿಗಳಿಗೆ ಖಾಸಗಿ ವೈದ್ಯರು ತಿಳಿಸಬೇಕು. ಖಾಸಗಿ ಕ್ಲಿನಿಕ್‌ಗಳು ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ತಾಲೂಕಿನಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕರ ಸರಕಾರಿ ಆಸ್ಪತ್ರೆ, ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಣಸಗಿ ತಾಲೂಕಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಕೋಡೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಪೈಪ್‌ಲೈನ್ ಬೆಡ್‌ಗಳಿವೆ. ಸುರಪುರ ಮತ್ತು ಹುಣಸಗಿ ತಾಲೂಕು ಸೇರಿ ಒಟ್ಟು 280 ಆಕ್ಸಿಜನ್ ಪೈಪ್‌ಲೈನ್ ಬೆಡ್‌ಗಳು, ಒಟ್ಟು ಬೆಡ್ ಮತ್ತು ಎಎಂಪಿ, ಕಾಟ್‌ಗಳು 256, ಆಕ್ಸಿಜನ್ ಕಾನ್ಸಂಟ್ರೇಟರ ಒಟ್ಟು 268, ಜಂಬು ಮತ್ತು ಚಿಕ್ಕ ಸಿಲಿಂಡರ್ ಒಟ್ಟು 131 ಇವೆ ಎಂದು ತಿಳಿಸಿದರು.

ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೈದ್ಯರು ಮತ್ತು ಸಿಬ್ಬಂದಿಗೆ ಮುಂಜಾಗ್ರತವಾಗಿ ತಯಾರಿರಲು ಸೂಚಿಸಲಾಗಿದೆ. ಎಲ್ಲ ಖಾಸಗಿ ವೈದ್ಯರು ಕಡ್ಡಾಯವಾಗಿ ಕೆ.ಪಿ.ಎಂ.ಇ. ನಡಿ ನೋಂದಣಿ ಮತ್ತು ಅವಧಿ ಮುಗಿದಿರುವ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ರಿನಿವಲ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ ಅವರು, ಮುಖ್ಯವಾಗಿ ಕ್ಷಯರೋಗಿಗಳಿಗೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲು ಖಾಸಗಿ ವೈದ್ಯರಿಗೆ ಸೂಚಿಸಿದರು.

ರೂಪಾಂತರ ಕೋವಿಡ್ ತಳಿ ಎಲ್ಲೆಡೆ ತನ್ನ ಪ್ರಭಾವ ಬೀರುತ್ತಿದ್ದು, 60 ವರ್ಷ ಮೇಲ್ಪಟ್ಟವರು, 15 ವರ್ಷದೊಳಗಿನ ಮಕ್ಕಳು, ಮಧುಮೇಹ(ಸಕ್ಕರೆ ಕಾಯಿಲೆ), ರಕ್ತದೊತ್ತಡ(ಬಿಪಿ)ಯಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕು. ಅಲ್ಲದೆ ತಪ್ಪದೇ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಅವಳಿ ತಾಲೂಕಿನ ಜನತೆಯಲ್ಲಿ ಮನವಿ ಮಾಡಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ