ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ: ಕೇಟೋಳಿರ ಕರುಣ್ ಅಪ್ಪಯ್ಯ

KannadaprabhaNewsNetwork | Published : Dec 29, 2023 1:32 AM

ಸಾರಾಂಶ

ನಾಪೋಕ್ಲು ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ನಡೆಯಿತು. ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸತತ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಎಸ್‌ಎಪಿ ಲ್ಯಾಬ್ ಇಂಡಿಯಾದ ಪ್ರಾಡಕ್ಟ್ ಓನರ್ ಕೇಟೋಳಿರ ಕರುಣ್ ಅಪ್ಪಯ್ಯ ಹೇಳಿದರು.

ಇಲ್ಲಿನ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಜೀವನದ ಪ್ರತಿಯೊಂದು ಚಟುವಟಿಕೆಯಲ್ಲೂ ನಯ, ವಿನಯತೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ನಾವು ಗಳಿಸಿದ ಜ್ಞಾನ ಇತರರ ಜೀವನದ ಮೇಲೆ ಪ್ರಭಾವ ಬೀರುವಂತಾಗಬೇಕು. ಧನಾತ್ಮಕವಾಗಿ ಯೋಚಿಸುವುದು ಅಗತ್ಯ, ಇದರಿಂದ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಅಧ್ಯಕ್ಷತೆ ವಹಿಸಿ, ಸಂಸ್ಥೆಯ ಶ್ರೇಯಾಭಿವೃದ್ಧಿಗೆ ಶ್ರಮಿಸಿದವರನ್ನು ನೆನೆಸಿಕೊಂಡು ಸಂಸ್ಥೆ ನಡೆದುಬಂದ ದಾರಿಯ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ದತ್ತಿನಿಧಿ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ನಿರ್ದೇಶಕರಾದ ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ, ಬೊಪ್ಪಂಡ ಕುಶಾಲಪ್ಪ, ಮಕ್ಕಿ ಸುಬ್ರಮಣ್ಯ, ಬಿದ್ದಾಟ೦ಡ ಪಾಪ ಮುದ್ದಯ್ಯ, ಕೊಂಬಂಡ ಗಣೇಶ್, ನೆರವಂಡ ಸುನಿಲ್ ದೇವಯ್ಯ, ಬಿದ್ದಾತಂಡ ಮುತ್ತಣ್ಣ, ನಾಯಕಂಡ ದೀಪು ಚಂಗಪ್ಪ, ಅಪ್ಪಚೆಟ್ಟೋಳಂಡ ನವೀನ್, ಚೌರಿರ ನೀರನ್ ಮಂದಣ್ಣ, ಶಾಲೆಯ ಪ್ರಾಂಶುಪಾಲರಾದ ಕಲ್ಯಾಟಂಡ ಶಾರದಾ ಅಪ್ಪಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿರಿಯ ಶಿಕ್ಷಕಿ ಮುಂಡಂಡ ಕವಿತಾ ಸ್ವಾಗತಿಸಿದರು. ಕಂಗಂಡ ಸ್ಮಿತಾ ಅತಿಥಿ ಪರಿಚಯ ಮಾಡಿದರು. ಪ್ರಾಂಶುಪಾಲೆ ಶಾರದಾ ವರದಿ ಮಂಡಿಸಿದರು. ವಿದ್ಯಾರ್ಥಿ ನಾಯಕಿ ಮಾಚೇಟಿರ ಹರ್ಷಿತ ಕುಶಾಲಪ್ಪ ವಿದ್ಯಾರ್ಥಿ ಸಂಘದ ವರದಿ ವಾಚಿಸಿದರು. ಕ್ರೀಡಾ ವರದಿಯನ್ನು ಕ್ರೀಡಾ ಶಿಕ್ಷಕಿ ಕನ್ನಂಡ ಸರಿತಾ ವಾಚಿಸಿದರು. ಪಾಡಿಯಮ್ಮಂಡ ಚಂದ್ರಕಲಾ ಮತ್ತು ಬೊಳ್ಳಚೆಟ್ಟೀರ ಶೋಭ ನಿರೂಪಿಸಿದರು. ಉದಿಯಂಡ ಲೀಲಾವತಿ ವಂದಿಸಿದರು.

ಅನಂತರ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Share this article