ಕನ್ನಡಪ್ರಭ ವಾರ್ತೆ ಮಂಗಳೂರು
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ರಾಜ್ಯಪಾಲರ ವಿರುದ್ಧ ದೇಶದ್ರೋಹದ ಹೇಳಿಕೆ ನೀಡಿದ್ದು, ಅವರ ಭಾಷಣದ ಬಳಿಕ ಕಾಂಗ್ರೆಸ್ ಪಕ್ಷದ ತಂಡವೊಂದು ಬಸ್‌ಗೆ ಕಲ್ಲೆಸೆದು, ರಸ್ತೆಯಲ್ಲಿ ಟಯರ್ ಸುಟ್ಟು ಪ್ರತಿಭಟಿಸಿರುವುದು ಅಪಾಯಕಾರಿ ಬೆಳವಣಿಗೆಗೆ ಅಡಿಪಾಯ ಹಾಕಿಕೊಟ್ಟಂತಾಗಿದೆ. ತಕ್ಷಣ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆ ವಿವಿಧ ಸಂಘ ಸಂಸ್ಥೆಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಬಸ್‌ಗೆ ಕಲ್ಲೆಸೆದು ಪ್ರತಿಭಟಿಸುವ ಮಟ್ಟಕ್ಕಿಳಿದರೆ ಪೊಲೀಸರು ಆಗಲೂ ಸುಮ್ಮನಿರುತ್ತಾರಾ? ಅಂತಹ ಘಟನೆಗಳಿಗೆ ಎಡೆಮಾಡಿ ಕೊಡದೆ ಐವನ್ ವಿರುದ್ಧ ಕೇಸು ಹಾಕಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೂಂಡಾಗಿರಿ ಆರಂಭವಾಗಿದೆ. ಪೊಲೀಸರು ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಗೂಂಡಾಗಿರಿ ಅತಿರೇಕವಾಗಿತ್ತು. ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಕಡಿಮೆಯಾಗಿತ್ತು. ಇದೀಗ ಮತ್ತೆ ಶುರುವಾಗಿದೆ ಎಂದು ಭರತ್ ಶೆಟ್ಟಿ ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಭರತ್ ರಾಜ್ ಕೃಷ್ಣಾಪುರ, ಸಂದೀಪ್ ಪಚ್ಚನಾಡಿ, ರಣ್‌ದೀಪ್ ಕಾಂಚನ್ ಇದ್ದರು.
ಐವನ್ ಡಿಸೋಜ ವಿರುದ್ಧ ದೂರು ನೀಡಿದ ವಿಎಚ್‌ಪಿ ಕಾರ್ಯಕರ್ತ
ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿರುದ್ಧ ವಿಶ್ವಹಿಂದೂ ಪರಿಷತ್- ಬಜರಂಗದಳ ಕಾರ್ಯಕರ್ತರೊಬ್ಬರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಅಖಿಲೇಶ್ ಶೆಟ್ಟಿ ಎಂಬವರು ದೂರು ನೀಡಿದ್ದು, ದೇಶದ್ರೋಹದ ಭಾಷಣದ ಮೂಲಕ ಶಾಂತಿ ಕದಡಿಸಲು ಪ್ರಚೋದಿಸಿದ ಐವನ್ ಡಿಸೋಜ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಪೊಲೀಸರು ದೂರು ಪಡೆದು ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹಿಂಬರಹ ನೀಡಿದ್ದಾರೆ.ಬಿಜೆಪಿ ಯುವಮೋರ್ಚಾದಿಂದ ಸೋಮವಾರ ಬರ್ಕೆ ಪೊಲೀಸರಿಗೆ ದೂರು ನೀಡಲಾಗಿತ್ತು.