ಮಾನವ ಹಕ್ಕುಗಳ ದಿನಾಚರಣೆಗೆ ಚಾಲನೆ ನೀಡಿದ ನ್ಯಾಯಮೂರ್ತಿ ಕೆ. ಗುರುಪ್ರಸಾದ
ಗದಗ: ಸಮಾಜದಲ್ಲಿ ಮಾನವ ಹಕ್ಕು ಉಲ್ಲಂಘನೆಯಂತಹ ಘಟನೆಗಳು ನಡೆದ ಒಂದು ವರ್ಷದೊಳಗೆ ಸಂಬಂಧಿಸಿದ ದಾಖಲೆಗಳೊಂದಿಗೆ ರಾಜ್ಯ ಅಥವಾ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ದಾಖಲಿಸಿ ನ್ಯಾಯ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಹೇಳಿದರು. ಅವರು ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಜರುಗಿದ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾನವ ಹಕ್ಕು ಆಯೋಗವು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದಲ್ಲಿ ಅಪಾರ ಜ್ಞಾನ ಹೊಂದಿದ ಐದು ಸದಸ್ಯರನ್ನು ನೇಮಕಗೊಳಿಸಲಾಗುತ್ತಿದೆ. ಇದರಲ್ಲಿ ಆಯೋಗದ ಅಧ್ಯಕ್ಷರನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳನ್ನು ಸರ್ಕಾರ ನೇಮಕ ಮಾಡುತ್ತದೆ. ಅದರಂತೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕಗೊಳಿಸಿ ಮಾನವ ಹಕ್ಕು ಉಲ್ಲಂಘನೆ ಪ್ರಕರಣ ಕುರಿತು ತನಿಖೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಲು ತಿಳಿಸಲಾಗಿದೆ.ಮಾನವ ಹಕ್ಕು ಪ್ರಕರಣಗಳು ಹೆಚ್ಚಾಗಿ ಸರ್ಕಾರಿ ಸಂಸ್ಥೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕಾರಾಗೃಹಗಳಲ್ಲಿ ಕಂಡುಬರುತ್ತವೆ. ಮಾನವನಿಗೆ ಸಮಾಜದಲ್ಲಿ ಘನತೆಯಿಂದ ಜೀವಿಸಲು ಅಗತ್ಯವಿರುವ ಎಲ್ಲ ಕಾನೂನಾತ್ಮಕ ಹಕ್ಕುಗಳೂ ಸಹ ಮಾನವ ಹಕ್ಕುಗಳಾಗಿವೆ. ಇವುಗಳಿಗೆ ಧಕ್ಕೆ ಬಂದಲ್ಲಿ ಆಯೋಗದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬೇಕು ಎಂದು ಹೇಳಿದರು. 1948 ಡಿಸೆಂಬರ್ 10ರಂದು ವಿಶ್ವ ಸಂಸ್ಥೆಯಲ್ಲಿ ಮಾನವ ಹಕ್ಕು ದಿನಾಚರಣೆ ಜಾರಿಗೊಳಿಸಲಾಯಿತು. ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಅಂದು 48 ಸದಸ್ಯ ರಾಷ್ಟ್ರಗಳಿದ್ದವು ಎನ್ನುವುದು ಸೇರಿದಂತೆ ಅದರ ಇತಿಹಾಸ ಮತ್ತು ಅನುಕೂಲ, ಪ್ರಕರಣ ದಾಖಲಿಸುವುದು, ಯಾವುದು ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವುದರ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು 6 ಇವೆ. ಮಾನವ ಹಕ್ಕುಗಳು ತುಂಬಾ ಇವೆ. ಅವೆಲ್ಲವೂ ಸಹ ಮಾನವರು ಘನತೆಯಿಂದ ಜೀವಿಸಲು ಸಹಕಾರಿಯಾಗಿವೆ. ಈ ವರ್ಷದ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಘೋಷವಾಕ್ಯವನ್ನು ನೀಡಲಾಗಿದ್ದು, ಸಮಾನತೆ, ಸ್ವಾತಂತ್ರ್ಯ ಎಲ್ಲರಿಗೂ ನ್ಯಾಯ ಒದಗಿಸೋಣ ಎಂಬುದಾಗಿದೆ ಎಂದರು.ನಿವೃತ್ತ ನ್ಯಾಯಾಧೀಶ ಎಸ್.ಜಿ. ಪಲ್ಲೇದ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆ ಸಮಾಜದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ನಾಗರಿಕರ ಕರ್ತವ್ಯಗಳನ್ನು ಅರಿಯುವ ಜಾಗೃತಿ ಕಾರ್ಯಕ್ರಮ ಇದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿಯನ್ನು ಸಾರ್ವಜನಿಕರಿಗೆ, ಮಕ್ಕಳಿಗೆ, ಇಲಾಖೆಯ ಅಧಿಕಾರಿಗಳಿಗೆ ಬೋಧಿಸಲಾಯಿತು. ನಗರಸಭೆಯ ಉಪಾಧ್ಯಕ್ಷೆ ಸುನಂದಾ ಬಾಕಳೆ, ಎಡಿಸಿ ಅನ್ನಪೂರ್ಣ ಎಂ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಂಜರಿ ಹೊಂಬಾಳಿ ನಿರೂಪಿಸಿದರು.