ಆಹಾರ ಕಲಬೆರಕೆ ಕಂಡುಬಂದ್ರೆ ಕೇಸ್‌ ದಾಖಲಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

KannadaprabhaNewsNetwork |  
Published : Aug 30, 2024, 01:06 AM IST
ಪೋಟೋ: 29ಎಸ್‌ಎಂಜಿಕೆಪಿ04ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಂರಕ್ಷಣಾ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗ್ರಾಹಕರ ಸಂರಕ್ಷಣಾ ಸಭೆ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಆಹಾರ ಕಲಬೆರಕೆ ತಡೆಗಟ್ಟುವ ಕುರಿತು ವ್ಯಾಪಕವಾಗಿ ದಾಳಿಗಳನ್ನು ನಡೆಸಿ, ಪ್ರಕರಣ ದಾಖಲಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಂರಕ್ಷಣಾ ಸಭೆಯಲ್ಲಿ ಅವರು ಮಾತನಾಡಿ, ಮಾರುಕಟ್ಟೆ ಹಾಗೂ ಯಾವುದೇ ಕ್ಷೇತ್ರದಲ್ಲಿ ಗ್ರಾಹಕರಿಗೆ ಅನಾನುಕೂಲವಾಗದಂತೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಹಾರ ಕಲಬೆರಕೆಯ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು ಆಹಾರ ಕಲಬೆರಕೆ ತಡೆಟ್ಟುವ ಕೆಲಸ ಆಗಬೇಕು. ಅನಿರೀಕ್ಷಿತ ದಾಳಿಗಳನ್ನು ನಡೆಸಬೇಕು ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಇಂಟರ್‌ನೆಟ್ ಕೇಂದ್ರಗಳಲ್ಲಿ ತಾವು ನೀಡುವ ಸೇವೆಗಳ ಶುಲ್ಕದ ವಿವರವಿರುವ ಫಲಕ ಪ್ರದರ್ಶಿಸಬೇಕು. ಇಲ್ಲವಾದಲ್ಲಿ ಪರವಾನಗಿ ರದ್ದುಗೊಳಿಸಲಾಗುವುದು. ಸಕಾಲವನ್ನು ಗಮನಿಸಲಾಗುತ್ತಿದೆ. ಸುಸೂತ್ರವಾಗಿ ನಡೆಯುತ್ತಿದೆ. ಎಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲವೋ ಅಂತಹ ಪ್ರಕರಣಗಳು ಕಂಡುಬಂದಲ್ಲಿ ಗಮನಕ್ಕೆ ತರುವಂತೆ ಹೇಳಿದರು.

ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರು, ತಂಪು ಪಾನೀಯ, ಬಿಸ್ಕತ್ತು, ಚಾಕೊಲೇಟ್‌ಗಳಿಗೆ ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ಪಡೆದು ಕೊಳ್ಳುತ್ತಿರುವ ಬಗ್ಗೆಯೂ ದೂರುಗಳು ಬಂದಿದ್ದು, ಈ ಬಗ್ಗೆ ತಪಾಸಣೆ ನಡೆಸಿ ದಂಡ ವಿಧಿಸುವಂತೆ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಿಗೆ ಸೂಚನೆ ನೀಡಲಾಯಿತು.

ಭದ್ರಾವತಿ ತಾಲೂಕಿನಲ್ಲಿ ಬೆಲ್ಲ ತಯಾರಿಕಾ ಘಟಕಗಳಲ್ಲಿ ಬೆಲ್ಲ ತಯಾರಿಸಲು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ ಎನ್ನುವ ದೂರುಗಳಿದ್ದು, ಈ ಕುರಿತು ಪರಿಶೀಲನೆ ನಡೆಸಿ ಕ್ರಮ ವಹಿಸಲು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಲ್ದಾಣಗಳಲ್ಲಿ ಶೌಚಾಲಯಗಳ ಬಳಕೆಗೆ ಹೆಚ್ಚುವರಿ ಶುಲ್ಕ ವಸೂಲಾತಿ ಮಾಡುತ್ತಿರುವ ಕುರಿತು ಹಾಗೂ ಕಾರ್ಗೋ ಸೇವೆಗಳಿಗೂ ಹೆಚ್ಚುವರಿ ಮೊತ್ತ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಸ್ವೀಕಾರಗೊಂಡಿದ್ದು, ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಸ್ತು ಕ್ರಮವನ್ನು ತೆಗೆದುಕೊಳ್ಳುವಂತೆ ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳಿಗೆ ತಿಳಿಸಿದರು.

ಹೋಟೆಲ್ ಹಾಗೂ ಫಾಸ್ಟ್‌ಫುಡ್ ತಯಾರಿಕಾ ಅಂಗಡಿಗಳಲ್ಲಿ ನಿಷೇಧಿತ ಆಹಾರಗಳ ಬಣ್ಣಗಳನ್ನು ಬಳಸುತ್ತಿರುವ ಬಗ್ಗೆ ಹಾಗೂ ಅತಿ ಹೆಚ್ಚು ಅಜಿನೋ ಮೋಟೋ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ ಮಾಡುತ್ತಿರುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಹೋಟೆಲ್ ಮಾಲೀಕರು ಹಾಗೂ ಗ್ರಾಹಕರಿಗೆ ಜಾಗೃತಿ ಮೂಡಿಸುವಂತೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಮೆಡಿಕಲ್ ಸ್ಟೋರ್‌ಗಳು ಮತ್ತು ಜನೌಷಧ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಕೇಳಿ ಬರುತ್ತಿದ್ದು, ನಿಯಮಿತ ತಪಾಸಣೆ ಮತ್ತು ಅನಿರೀಕ್ಷಿತ ದಾಳಿಗಳನ್ನು ನಡೆಸುವಂತೆ ಸಹಾಯಕ ಔಷಧ ನಿಯಂತ್ರಕರಿಗೆ ತಿಳಿಸಿದರು.

ಗ್ರಾಹಕ ರಕ್ಷಣಾ ಪರಿಷತ್ ಸದಸ್ಯ ಕೆ.ಎನ್.ವೆಂಕಟಗಿರಿ ಮಾತನಾಡಿ, ಇಂಟರ್‌ನೆಟ್ ಕೇಂದ್ರಗಳಲ್ಲಿ ಪಹಣಿ ಮತ್ತಿತರೆ ದಾಖಲೆಗಳನ್ನು ಪಡೆಯುವ ವೇಳೆ ಸಾರ್ವಜನಿಕರಿಂದ ಹೆಚ್ಚುವರಿ ಶುಲ್ಕವನ್ನು ಪಡೆಯಲಾಗುತ್ತಿದೆ. ಆದ್ದರಿಂದ ಶುಲ್ಕ ವಿವರದ ಬೋರ್ಡ್ ಪ್ರದರ್ಶಿಸಬೇಕು. ಹಾಗೂ ಸಕಾಲ ಕುರಿತು ಕಾನೂನು, ಎಸ್‌ಓಪಿ ಇದ್ದರೂ ವಿವಿಧ ಇಲಾಖೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲವೆಂದು ದೂರಿದರು.

ಸಭೆಯಲ್ಲಿ ಆಹಾರ ಮತ್ತು ಗ್ರಾಹಕರ ಸರಬರಾಜು ಇಲಾಖೆ ಉಪ ನಿರ್ದೇಶಕ ಅವಿನ್, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ರಾಜು, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಗ್ರಾಹಕ ರಕ್ಷಣಾ ಪರಿಷತ್ ಸದಸ್ಯರಾದ ಕೆ.ಎನ್.ವೆಂಕಟಗಿರಿ, ಎಂ.ಎಂ.ಜಯಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯಲ್ಲೂ ಪಾಲ್ಗೊಳ್ಳಿ
ಮಹಿಳೆಯರ ಸೈನ್ಯ ಕಟ್ಟಿ ನಾಡರಕ್ಷಿಸಿದ್ದ ಮಲ್ಲಮ್ಮ