ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲು

KannadaprabhaNewsNetwork |  
Published : Dec 28, 2023, 01:46 AM IST
ಫೋಟೋ | Kannada Prabha

ಸಾರಾಂಶ

ಮಂಗಳವಾರ ರಾತ್ರಿ ನಡೆದ ಅಂಧಕಾಸುರನ ವಧೆಗೆ ಕಾರ್ಯಕ್ರಮದ ವಿಚಾರದಸಂಸ, ಶ್ರೀಕಂಠೇಶ್ವರನ ಭಕ್ತರ ನಡುವೆ ಮಾತಿನ ಚಕಮಕಿ ಪ್ರಕರಣ

ಕನ್ನಡಪ್ರಭ ವಾರ್ತೆ ನಂಜನಗೂಡು

ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಸಂಪ್ರದಾಯದಂತೆ ನಡೆಯುವ ಅಂಧಕಾಸುರನ ವಧೆಗೆ ಕಾರ್ಯಕ್ರಮದ ವಿಚಾರವಾಗಿ ದಸಂಸ ಮತ್ತು ಶ್ರೀಕಂಠೇಶ್ವರನ ಭಕ್ತರ ನಡುವೆ ನಡೆದಿದ್ದ ಮಾತಿನ ಚಕಮಕಿ ಪ್ರಕರಣದ ಬಗ್ಗೆ ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿವೆ.

ಬುಧವಾರ ಸಂಜೆ ರಾಕ್ಷಸ ಮಂಟಪ ವೃತ್ತದ ಬಳಿ ಶ್ರೀಕಂಠೇಶ್ವರ ದೇವಾಲಯದ ವತಿಯಿಂದ ಅಂಧಕಾಸುರನವಧೆ ಕಾರ್ಯಕ್ರಮದಲ್ಲಿನ ಗೊಂದಲ ವನ್ನು ಆಯೋಜಿಸಿತ್ತು. ದಸಂಸ ಸದಸ್ಯರು ರಂಗೋಲಿಯಲ್ಲಿ ಬಿಡಿಸಿರುವುದು ಮತ್ತು ಫ್ಲೆಕ್ಸ್ ಹಾಕಲಾಗಿರುವುದು ಮಹಿಷಾಸುರನ ಚಿತ್ರವೇ ಹೊರತು ಅಂಧಕಾಸುರನ ಚಿತ್ರವಲ್ಲ, ಆದ್ದರಿಂದ ಮಹಿಷನ ಚಿತ್ರವನ್ನು ತುಳಿದು ಅಪಮಾನ ಗೊಳಿಸಬಾರದೆಂದು ಪಟ್ಟು ಹಿಡಿದು ವಿರೋಧ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಯಾಗಿ ಶ್ರೀಕಂಠೇಶ್ವರ ಸ್ವಾಮಿಯವರ ಭಕ್ತರು ಮತ್ತು ಋತ್ವಿಕರು ತಲೆ ತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಸಂಬಂಧ ದೂರು ಪ್ರತಿ ದೂರು ದಾಖಲಾಗಿದೆ

ದಸಂಸ ಸದಸ್ಯರು ದೂರು

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ಶೋಷಿತ ಜನಾಂಗದ ಆದಿ ಪುರುಷನಾದ ಪೂಜ್ಯ ಮಹಿಷ ಚಕ್ರವರ್ತಿ ಇರುವ ಪ್ಲೆಕ್ಸ್ ಮತ್ತು ರಂಗೋಲಿಯನ್ನು ರಚಿಸಿರುವ ಮಹಿಷಾಸುರನ ಚಿತ್ರವನ್ನು ಸಂಹಾರ ಮಾಡುವ ಕಾರ್ಯಕ್ರಮವನ್ನು ರೂಪಿಸಿರುವ ಬಗ್ಗೆ ನಮಗೆ ಮಾಹಿತಿ ತಿಳಿದು, ಪಟ್ಟಣದ ರಾಕ್ಷಸ ಮಂಟಪ ವೃತ್ತದ ಬಳಿ ಹೋದಾಗ ಪೊಲೀಸ್ ಅಧಿಕಾರಿಗಳ ಜೊತೆ ಮಹಿಷ ನಮ್ಮ ಸಾಂಸ್ಕೃತಿಕ ದೊರೆ ಆದ್ದರಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಮಹಿಷನ ಚಿತ್ರವನ್ನು ತುಳಿಯುವುದು ಬೇಡ ಅಲ್ಲದೆ ಸರ್ಕಾರವೇ ಮೌಡ್ಯ ನಿಷೇಧ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಿರುವುದರಿಂದ ಮಹಿಷನನ್ನು ಧ್ವಂಸ ಮಾಡುವುದರಿಂದ ನಾಡಿಗೆ ಒಳಿತಾಗುತ್ತದೆ ಎಂಬ ಮೌಢ್ಯವನ್ನು ಜನರ ಮನಸ್ಸಿನಲ್ಲಿ ಭಿತ್ತಬಾರದೆಂದು ಶ್ರೀಕಂಠೇಶ್ವರ ದೇವಾಲಯದ ಇಓ ಜಗದೀಶ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡಾಗ. ಮೌಢ್ಯಾಚರಣೆಯನ್ನು ನಾನು ತಡೆಯುತ್ತೇನೆ ನೀವು ಶಾಂತವಾಗಿರಿ ಎಂದು ಹೇಳಿದರು.

ನಂತರ ತಾವೇ ಮುಂದೆ ನಿಂತು ದೇವರ ಉತ್ಸವ ಮೂರ್ತಿಯನ್ನು ಅವರಿಗೆ ಗೊತ್ತಿರುವ ಆಗಮಿಕರು, ಅರ್ಚಕಕರಿಂದ ಮಹಿಷನ ಚಿತ್ರ ರಂಗೋಲಿಯನ್ನು ಕಾಲಿನಿಂದ ತುಳಿದು ವಿಕೃತಿ ಮರೆದು ನಮ್ಮ ಧಾರ್ಮಿಕ ನಂಬಿಕೆಗೆ ಅಪಮಾನ ಮಾಡಿದ್ದಾರೆ. ನಾವು ಈ ಕೃತ್ಯವನ್ನು ತಡೆಯಲು ಮುಂದಾಗ ಅಲ್ಲಿದ್ದ ಕಪಿಲೇಶ್, ಅನಂತ, ಕಿರಣ, ರಾಜು, ರವಿ, ಗಿರೀಶ್ ಇತರರು ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದ್ದರಿಂದ ದೇವಾಲಯದ ಇಓ ಮತ್ತು ಅರ್ಚಕರು ಮತ್ತು ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದಸಂಸ ಮುಖಂಡರು ದೂರು ನೀಡಿದ್ದಾರೆ.

ದಸಂಸ ವಿರುದ್ದ ದೇವಾಲಯದ ಆಡಳಿತಾಧಿಕಾರಿ ಪ್ರತಿ ದೂರು

ದೇವಾಲಯದ ರೂಢೀ ಸಂಪ್ರದಾಯದಂತೆ ಪಟ್ಟಣದ ರಾಕ್ಷಸ ಮಂಟಪ ವೃತ್ತದ ಬಳಿ ಅಂಧಕಾಸುರನ ಸಂಹಾರ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ದೇವಾಲಯದಿಂದ ಉತ್ಸವ ಮೂರ್ತಿಯನ್ನು ತಂದು ಅಂಧಕಾಸುರನ ರಂಗೋಲಿಯಿಂದ ರಚಿಸಲಾಗಿರುವ ಅಂಧಕಾಸುರನ ಚಿತ್ರವನ್ನು ಹೋಗಲಾಡಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಈ ಬಗ್ಗೆ ಅಲ್ಲಿಗೆ ಅಡ್ಡಿಪಡಿಸಲು ಬಂದ ವ್ಯಕ್ತಿಗಳೊಡನೆ ಈ ಕಾರ್ಯಕ್ರಮ ಯಾವೊಬ್ಬ ವ್ಯಕ್ತಿ ಅಥವಾ ಪಂಗಡಕ್ಕೆ ಮನನೋಯಿಸುವಂತೆ ಕಾರ್ಯಕ್ರಮ ರೂಪಿಸಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೆ. ಆದರೂ ಸಹ ದೇವರ ಉತ್ಸವ ಮೂರ್ತಿ ರಾಕ್ಷಸ ಮಂಟಪದ ಬಳಿ ಬರುತ್ತಿದ್ದಂತೆ ಬಾಲರಾಜು, ಮಲ್ಲಹಳ್ಳಿ ನಾರಾಯಣ, ಅಭಿ ನಾಗಭೂಷಣ, ನಟೇಶ್, ಅಭಿಪವಾರ್ ಎಂಬ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ದೇವರ ಉತ್ಸವ ಮೂರ್ತಿಯ ಮೇಲೆ ಕುಡಿಯುವ ನೀರಿನ ಬಾಟೆಲ್ ನೀರು ಎರಚಿ ಧಾರ್ಮಿಕ ಕಾರ್ಯಕ್ರಮಗಳು ಅನೂಚಾನವಾಗಿ ಜರುಗಲು ಬಿಡದೆ ಅಡ್ಡಿಪಡಿಸಿ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಸಾರ್ವಜನಿಕವಾಗಿ ಧಕ್ಕೆ ಉಂಟು ಮಾಡಿದ್ದಾರೆ. ಆದ್ದರಿಂದ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಅಡ್ಡಿಪಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ರಕ್ಷಣೆ ನೀಡಬೇಕೆಂದು ದೇವಾಲಯದ ಇಓ ಜಗದೀಶ್ ಕುಮಾರ್ ದೂರು ನೀಡಿದ್ದಾರೆ.

ದೂರು ಮತ್ತು ಪ್ರತಿ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!