ಕೊಪ್ಪಳ:
ಗಣೇಶ ಚತುರ್ಥಿಯ ವೇಳೆ ಶಾಂತಿ, ಸೌಹಾರ್ದತೆ ಕಾಪಾಡಲು ವಿಶೇಷ ಕ್ರಮ ಹಾಗೂ ಮುಸ್ಲಿಂ ಹುಡುಗಿಯನ್ನು ಹಿಂದೂ ಹುಡುಗ ಮದುವೆ ಆದರೆ ₹ 5 ಲಕ್ಷ ನೀಡುವುದಾಗಿ ಹಾಗೂ ರಾಜ್ಯದಲ್ಲಿ ಮುಸ್ಲಿಂ ಸರ್ಕಾರ ಅಧಿಕಾರದಲ್ಲಿದೆ ಎಂದು ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಆರಸಿದ್ದಿಗೆ ಮಂಗಳವಾರ ಮನವಿ ಸಲ್ಲಿಸಲಾಗಿದೆ.ಕೊಪ್ಪಳ ಶಾಂತಿ-ಸೌಹಾರ್ದತೆಗೆ ಹೆಸರಾಗಿರುವ ನಾಡು. ಈ ಹಿಂದೆ ಗಣೇಶ ವಿಸರ್ಜನೆ ವೇಳೆ ಸಣ್ಣ-ಪುಟ್ಟ ಗಲಾಟೆ ಸಂಭವಿಸಿವೆ. ಆದರೆ, ಇತ್ತೀಚೆಗೆ ಗವಿಸಿದ್ದಪ್ಪ ನಾಯಕ ಕೊಲೆ ನಡೆದ ದಿನದಿಂದ ಏನೆಲ್ಲ ಬೆಳವಣಿಗೆಗಳು ನಡೆಯುತ್ತಿವೆ. ದಿನಕ್ಕೊಬ್ಬರು ಮೃತನ ಮನೆಗೆ ಬಂದು ಸಾಂತ್ವನ ಹೇಳುವ ನೆಪದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆ ಕಾರಣದಿಂದ ಊರಿನ ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದು ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಗವಿಸಿದ್ದಪ್ಪ ಕೊಲೆ ಹಿಂದಿರುವ ಕಾರಣಗಳು ಅದೇನೆ ಇರಲಿ. ಆದರೆ, ಕೊಲೆ ಆರೋಪಿಗಳು ಹೆಣ್ಣಿನ ವಿಷಯವಾಗಿ ಕೊಲೆ ಮಾಡಿದ್ದು ಇದನ್ನು ಎಲ್ಲರು ಖಂಡಿಸಲೇಬೇಕು. ಈ ಕೊಲೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿದ ಮೇಲೂ ಇಲ್ಲಸಲ್ಲದ ಗಾಳಿ ಸುದ್ದಿ ಹಬ್ಬಿಸುವುದು, ಜನರನ್ನು ಪ್ರಚೋದಿಸುವ ಹೇಳಿಕೆ ನೀಡುವುದು ಮುಂದುವರಿದಿದೆ. ಕೆಲವು ಕೋಮುವಾದಿ ಸಂಘಟನೆಗಳು ಈ ಪ್ರಕರಣವನ್ನೇ ನೆಪವಾಗಿಟ್ಟುಕೊಂಡು ತಮ್ಮ ಅಜೆಂಡಾ ಜಾರಿಗೊಳಿಸಲು ಪ್ರಯತ್ನಿಸುತ್ತಿವೆ ಎಂದು ದೂರಿದ್ದಾರೆ.ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ವಿಷ ಉಗುಳುವ ನಾಯಕರನ್ನು ಕರೆಯಿಸಿ ಏನೇನೋ ಮಾತನಾಡಿಸಿ, ಊರಿನ ವಾತಾವರಣ ಹದಗೆಡಿಸುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದ ಕೋಮುವಾದಿ ಸಂಘಟನೆಗಳ ಮುಖಂಡರ ಮೇಲೆ ನಿಗಾ ಇಡಬೇಕು. ಅಂಥವರ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಸಂಘಟನೆಗಳು, ಗಣಪತಿ ಇಡುವ ಸಮಿತಿ ಡಿಜೆ ಬಳಸದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ವೇಳೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹಿರಿಯ ಮುಖಂಡ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ್ ಶೀಲವಂತರ, ಮಹಾಂತೇಶ ಕೋತಬಾಳ, ಎಸ್.ಎ. ಗಫಾರ್. ಚನ್ನಬಸಪ್ಪ ಅಪ್ಪಣವರ್, ಕೆ.ಬಿ. ಗೊನಾಳ, ಗಾಳೆಪ್ಪ ಮುಂಗೊಲಿ, ಮಖಬೂಲ್ ರಾಯಚೂರು, ಶಿವಪ್ಪ ಹಡಪದ ಇದ್ದರು.