ನಗರಸಭೆ ಅನುದಾನ ಲೂಟಿ ವಿರುದ್ಧ ಎಫ್‌ಐಆರ್‌ ದಾಖಲಿಸಿ

KannadaprabhaNewsNetwork |  
Published : Feb 02, 2025, 11:49 PM IST
02 ಎಚ್‍ಆರಆರ್ 04ಹರಿಹರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಗುತ್ತಿಗೆದಾರ ಮೊಹ್ಮದ್ ಮಜಹರ್ ಮಾತನಾಡಿದರು. | Kannada Prabha

ಸಾರಾಂಶ

ಕಾಮಗಾರಿ ನಡೆಸದೇ ನಗರಸಭೆಯ ಅಂದಾಜು ₹1 ಕೋಟಿ ಅನುದಾನ ಲೂಟಿ ಹೊಡೆದ ಆರೋಪಿಗಳಾದ ನಗರಸಭೆ ಹಿಂದಿನ ಪೌರಾಯುಕ್ತ, ಎಇಇ, ಎಇ, ಗುತ್ತಿಗೆದಾರರು ಹಾಗೂ ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್ ವರದಿ ನೀಡಿದೆ. ತಜ್ಞರು ಸಂಬಂಧಿತರ ವಿರುದ್ಧ ಕೂಡಲೇ ಎಫ್‍ಐಆರ್ ದಾಖಲಿಸಬೇಕೆಂದು ನಗರಸಭೆ ಗುತ್ತಿಗೆದಾರ ಮೊಹ್ಮದ್ ಮಜಹರ್ ಆಗ್ರಹಿಸಿದ್ದಾರೆ.

- ಹರಿಹರದಲ್ಲಿ ನಗರಸಭೆ ಗುತ್ತಿಗೆದಾರ ಮೊಹ್ಮದ್ ಮಜಹರ್ ಆಗ್ರಹ

- - - ಕನ್ನಡಪ್ರಭ ವಾರ್ತೆ ಹರಿಹರ

ಕಾಮಗಾರಿ ನಡೆಸದೇ ನಗರಸಭೆಯ ಅಂದಾಜು ₹1 ಕೋಟಿ ಅನುದಾನ ಲೂಟಿ ಹೊಡೆದ ಆರೋಪಿಗಳಾದ ನಗರಸಭೆ ಹಿಂದಿನ ಪೌರಾಯುಕ್ತ, ಎಇಇ, ಎಇ, ಗುತ್ತಿಗೆದಾರರು ಹಾಗೂ ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್ ವರದಿ ನೀಡಿದೆ. ತಜ್ಞರು ಸಂಬಂಧಿತರ ವಿರುದ್ಧ ಕೂಡಲೇ ಎಫ್‍ಐಆರ್ ದಾಖಲಿಸಬೇಕೆಂದು ನಗರಸಭೆ ಗುತ್ತಿಗೆದಾರ ಮೊಹ್ಮದ್ ಮಜಹರ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ತಾವು ದೂರು ನೀಡಿದ್ದನ್ನು ಆಧರಿಸಿ ಜಿಲ್ಲಾಧಿಕಾರಿ ಅವರು ಜಿಲ್ಲಾ ನಗರಾಭಿವೃದ್ಧಿ ಕೋಶದ ಪುರಸಭೆ ತಹಸೀಲ್ದಾರ್, ಕಾರ್ಯಪಾಲಕ ಎಂಜಿನಿಯರ್ ಹಾಗೂ ಇತರೆ ತಜ್ಞರು ಒಳಗೊಂಡ ತನಿಖಾ ತಂಡವನ್ನು ರಚಿಸಿದ್ದರು. ಸದರಿ ತನಿಖಾ ತಂಡ ನಗರದ ವಿವಿಧ ವಾರ್ಡುಗಳಲ್ಲಿ 20 ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದೆ ಎಂದರು.

ಜೆ.ಸಿ.ಬಡಾವಣೆಯ ನರ್ತಕಿ ಬಾರ್ ಹಿಂಭಾಗದ ಕನ್ಸರ್‍ವೆನ್ಸಿಯ ಸಿಸಿ ಚರಂಡಿಯನ್ನು 95 ಮೀಟರ್ ಬದಲು ಕೇವಲ 58 ಮೀ. ನಿರ್ಮಿಸಿದ್ದಾರೆ. ಇದೇ ಕಾಮಗಾರಿ ಆಧರಿಸಿ ಮತ್ತೊಮ್ಮೆ ₹5 ಲಕ್ಷ ಬಿಲ್ ಪಡೆದಿರುವುದು ಸೇರಿದಂತೆ ಉಳಿದ 19 ಕಡೆ ಕಾಮಗಾರಿ ನಡೆಸದೇ ಬಿಲ್ ಪಾವತಿಸಿರುವುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ ಎಂದು ತಿಳಿಸಿದರು.

ಸಾಮಾನ್ಯ ನಿಧಿ ಹಣ ಬಳಕೆ:

20 ಕಾಮಗಾರಿಗಳ ಪೈಕಿ 19 ಕಾಮಗಾರಿಗಳು ಕಿರು ನೀರು ಸರಬರಾಜು ಟ್ಯಾಂಕ್ ನಿರ್ಮಾಣ ಹಾಗೂ ಪೈಪ್‍ಲೈನ್ ಅಳವಡಿಸುವ ಕಾಮಗಾರಿಗಳಾಗಿವೆ. ಈ ಎಲ್ಲ ಕಾಮಗಾರಿಗಳು 2020- 2021ನೇ ಸಾಲಿನಲ್ಲಿ ನಗರಸಭೆ ಸಾಮಾನ್ಯ ನಿಧಿಯಿಂದ ಅನುದಾನ ಬಳಕೆ ಮಾಡಲಾಗಿದೆ. ಕಾಮಗಾರಿ ನಡೆಸದೇ, ಅಂದಾಜು ₹1 ಕೋಟಿ ನಗರಸಭೆ ಅನುದಾನ ಲೂಟಿ ಹೊಡೆದಿರುವುದು ದೃಢವಾಗಿದೆ. ಇದರಿಂದ ಜಿಲ್ಲಾಧಿಕಾರಿ ಅವರು ನಗರಸಭೆಯ ಆಗಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಾಗೂ ಸಂಬಧಿತರ ವಿರುದ್ಧ ಎಫ್‍ಐಆರ್ ಕೈಗೊಳ್ಳಲು ಜ.24ರಂದು ಸೂಚನೆ ನೀಡಿದ್ದರು. ಇದರ ಅನ್ವಯ ಈಗಿನ ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಕೂಡಲೇ ಆರೋಪಿತರ ಪಟ್ಟಿ ಮಾಡಿ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಬೇಕೆಂದು ಆಗ್ರಹಿಸಿದರು.

ಹರಿಹರದ ವಾರ್ಡ್ ಸಂಖ್ಯೆ 28 ರಲ್ಲಿ 4 ಕಾಮಗಾರಿ, ವಾರ್ಡ್ ನಂ.27ರಲ್ಲಿ 2, ನಂತರ ವಾರ್ಡ್ ಸಂಖ್ಯೆ 1, 12, 13, 14, 19, 22, 23, 25, 29, 24 ಹಾಗೂ ಇತರೆಡೆ ಕಾಮಗಾರಿ ನಡೆಸದೆ ನಗರಸಭೆಯ ಕೆಲವು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಾಗೂ ಇತರರು ಅನುದಾನ ಲೂಟಿ ಹೊಡೆದಿದ್ದಾರೆ ಎಂದು ತಿಳಿಸಿದರು.

ತನಿಖಾ ತಂಡದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಾದ ಪುರಸಭೆ ತಹಸೀಲ್ದಾರ್ ಡಾ.ವಿನಯ ಹೂಗಾರ್, ಕಾರ್ಯಪಾಲಕ ಎಂಜಿನಿಯರ್ ಕೆ.ಎನ್.ಸ್ವಾಮಿ, ನೋಡಲ್ ಅಧಿಕಾರಿ ಪಿ.ಜೆ.ಪ್ರಶಾಂತ್, ಸಮುದಾಯ ಸಂಘಟನಾಧಿಕಾರಿ ಅಶೋಕ್ ಪಿ., ಕಚೇರಿ ವ್ಯವಸ್ಥಾಪಕ ಬಿ.ಏಕನಾಥ್, ಪ್ರಥಮ ದರ್ಜೆ ಸಹಾಯಕರಾದ ಎಸ್.ಎಚ್. ಮಂಜುನಾಥ್, ಸುರೇಶ್ ಸಿ.ಕೆ. ಇದ್ದು, ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರವೇ (ಎಚ್.ಶಿವರಾಮೇಗೌಡ ಬಣ) ತಾಲೂಕು ಅಧ್ಯಕ್ಷ ಎಂ.ಇಲಿಯಾಸ್ ಅಹ್ಮದ್, ಜಹೀರ್ ಅಹ್ಮದ್, ನೂರ್ ಮೊಹ್ಮದ್ ಇದ್ದರು.

- - - -02ಎಚ್‍ಆರಆರ್04:

ಹರಿಹರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಗುತ್ತಿಗೆದಾರ ಮೊಹ್ಮದ್ ಮಜಹರ್ ಮಾತನಾಡಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ