ಡಿವೈಎಸ್‌ಪಿಗೆ ಮನವಿ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಹಾಸನದ ಹೆಣ್ಣುಮಕ್ಕಳ ವಿರುದ್ಧ ಅಸಭ್ಯವಾಗಿ ರೀಲ್ಸ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವವರ ವಿರುದ್ಧ ದೂರು ದಾಖಲಿಸುವಂತೆ ವಕೀಲರಾದ ಮಧುಸೂಧನ್ ನಾಗಸಮುದ್ರ ಒತ್ತಾಯಿಸಿದ್ದಾರೆ.
ಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಡಿವೈಎಸ್‌ಪಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಹಾಸನ ಜಿಲ್ಲೆಯಾದ್ಯಂತ ಪ್ರಭಾವಿ ರಾಜಕಾರಣಿಗಳಿಗೆ ಸಂಬಂದಿಸಿದ್ದು ಎನ್ನಲಾದ ವಿಡಿಯೋ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಎಸ್‌ಐಟಿ ತನಿಖಾ ತಂಡವನ್ನು ನೇಮಕ ಮಾಡಿ ತನಿಖೆ ನಡೆಸುತ್ತಿದ್ದು ಸದರಿ ಪ್ರಕರಣವು ತನಿಖಾ ಹಂತದಲ್ಲಿರುತ್ತದೆ. ಹೀಗಿರುವಾಗ ವಿಕೃತ ಮನಸ್ಸುಳ್ಳ ವ್ಯಕ್ತಿಗಳು ಹಾಸನದ ಹೆಣ್ಣುಮಕ್ಕಳ ವಿರುದ್ಧ ಅಸಭ್ಯವಾಗಿ ಮತ್ತು ದುರುದ್ದೇಶದಿಂದ ಇಡೀ ಹೆಣ್ಣು ಕುಲಕ್ಕೆ ಅವಮಾನವಾಗುವ ರೀತಿಯಲ್ಲಿ ವೈಯಕ್ತಿಕ ಲಾಭಕ್ಕಾಗಿ ಇಬ್ಬರು ವ್ಯಕ್ತಿಗಳು ರೀಲ್ಸ್ ಮಾಡಿ, ಅದನ್ನು ಮನಬಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ವಿಡಿಯೋದಿಂದ ಸಮಾಜದಲ್ಲಿ ಹೆಣ್ಣುಮಕ್ಕಳ ಪವಿತ್ರವಾದ ಸ್ಥಾನಕ್ಕೆ ಚ್ಯುತಿ ಉಂಟಾಗುತ್ತದೆ. ಇದರಿಂದ ವಿಕೃತ ಮನಸ್ಸುಳ್ಳ ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಗುರುತಿಸಿಕೊಂಡು, ಹೆಚ್ಚು ಹೆಚ್ಚು ಲೈಕ್ ಮತ್ತು ಶೇರ್ ಮಾಡಿಕೊಂಡು, ಹಣ ಮಾಡುವ ದುರುದ್ದೇಶ ಹೊಂದಿರುತ್ತಾರೆ. ಈ ನಾಗರಿಕ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನವಿದ್ದು, ಅದನ್ನು ಹಾಳು ಮಾಡಲು ಪ್ರಯತ್ನಿಸಿ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಈ ವಿಕೃತ ಮನಸ್ಸುಳ್ಳ ವ್ಯಕ್ತಿಗಳನ್ನು ಬಂಧಿಸಿ, ಅವರು ಬಿಟ್ಟಿರುವ ವಿಡಿಯೋಗಳನ್ನು ಡಿಲಿಟ್ ಮಾಡಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಅಧ್ಯಕ್ಷ ತೇಜಸ್‌ಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ ಸಿ.ಜಿ.ರವಿ ಇದ್ದರು.