ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3 ವರ್ಷದಿಂದಲೂ ಖಾಲಿ ಹುದ್ದೆಗಳ ಭರ್ತಿಗಾಗಿ ಧಾರವಾಡ ಇತರೆ ಕಡೆ ವಿದ್ಯಾರ್ಥಿ, ಯುವಜನರು, ನಿರುದ್ಯೋಗಿ ಪದವೀಧರರು ಹೋರಾಟ ನಡೆಸುತ್ತಿದ್ದಾರೆ. ಧಾರವಾಡ, ಮೈಸೂರು, ಕಲಬುರಗಿ ಸೇರಿದಂತೆ ಅನೇಕ ಕಡೆ ಲಕ್ಷಾಂತರ ರು. ಕೊಟ್ಟು, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುವ ಯುವಜನರಿಗೆ ಉದ್ಯೋಗ ಸಿಗಬೇಕೆಂಬ ಸದುದ್ದೇಶದಿಂದ ಸರ್ಕಾರ ನೇಮಕಾತಿಗೆ ಮುಂದಾಗಿದೆ ಎಂದರು.
ಒಳ ಮೀಸಲಾತಿ ಕಾರಣಕ್ಕೆ ಹುದ್ದೆಗಳ ನೇಮಕಾತಿ ಆಗಿರಲಿಲ್ಲ. ಇದೀಗ ರಾಜ್ಯಪಾಲರೂ ಅಂಕಿತ ಹಾಕುವುದರೊಂದಿಗೆ ನೇಮಕಾತಿ ಪ್ರಕ್ರಿಯೆಗೆ ಯಾವುದೇ ಅಡೆತಡೆ ಇಲ್ಲದಂತಾಗಿದೆ. ಆದರೆ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಿದ ನಂತರವೇ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಒಂದೇ ಸಲಕ್ಕೆ 56432 ಹುದ್ದೆಗಳ ಭರ್ತಿಗೆ ಮುಂದಾಗಿದ್ದು ಸ್ವಾಗತಾರ್ಹ. ನೇಮಕಾತಿ ಪ್ರಕ್ರಿಯೆಯಲ್ಲಿ ಒಳ ಮೀಸಲಾತಿಯನ್ನೂ ಅನ್ವಯಿಸಿ, ಉಳಿದ ಪ್ರಕ್ರಿಯೆಗೆ ಮುಂದಾಗಲಿ ಎಂದು ಆಂಜನೇಯ ಹೇಳಿದರು.ರಾಜ್ಯಪಾಲರ ಅಂಕಿತದೊಂದಿಗೆ ಒಳ ಮೀಸಲಾತಿಗೆ ಕಾನೂನಾತ್ಮಕ ಬಲ ತುಂಬಿದಂತಾಗಿದೆ. ಒಳ ಮೀಸಲಾತಿ ಹುದ್ದೆ ತುಂಬುವಾಗ 6:6:5 ಅನುಪಾತದಂತೆ ತುಂಬಬೇಕು. ಹಿಂದಿನ ಬಿಜೆಪಿ ಸರ್ಕಾರವು ಎಸ್‌ಸಿಗೆ ಶೇ.17, ಎಸ್‌ಟಿಗೆ ಶೇ.7 ಮೀಸಲಾತಿ ನೀಡಿತ್ತು. ಪರಿಶಿಷ್ಟರಿಗೆ ಇದ್ದ ಶೇ.24 ಮೀಸಲಾತಿ ಶೇ.18ಕ್ಕೆ ಹೇಗೆ ಮಾಡಿದ್ದೀರಿ? ಬಿಜೆಪಿ ಸರ್ಕಾರದಲ್ಲಿ 4 ವರ್ಷ ಶೇ.24 ಮೀಸಲಾತಿಯಲ್ಲೇ ನೇಮಕಾತಿ ಪ್ರಕ್ರಿಯೆ ಆಗಿದೆ. ಅದನ್ನು ಈಗ ನ್ಯಾಯಾಲಯದ ನಿರ್ಬಂಧವಿದೆಯೆಂದು ಶೇ.18ಕ್ಕೆ ಹೇಗೆ ಮಾಡುತ್ತೀರಿ? ಬಿಜೆಪಿ ಸರ್ಕಾರ ಎಸ್ಸಿಗೆ ಶೇ.15 ಇದ್ದುದನ್ನು ಶೇ.17, ಎಸ್‌ಟಿಗೆ ಶೇ.3 ಇದ್ದುದನ್ನು ಶೇ.7ಕ್ಕೆ ತಂದಿತ್ತು. ಈಗ ಶೇ.18ಕ್ಕೆ ಇಳಿಸಿದರೆ ಶೇ.2ರಷ್ಟು ಮೀಸಲಾತಿ ಅವಕಾಶ ಪರಿಶಿಷ್ಟ ಜಾತಿ ಜನ ಕೈತಪ್ಪಲಿದೆ ಎಂದು ಅವರು ತಿಳಿಸಿದರು.
ಮಾದಿಗರ ಜನಸಂಖ್ಯೆ ಆದರಿಸಿ ಶಿಕ್ಷಣ, ಉದ್ಯೋಗದಲ್ಲಿ ಒಳ ಮೀಸಲಾತಿ ಸಿಗುತ್ತದೆ. ಒಳ ಮೀಸಲಾತಿಗೆ ವಿರೋಧಿಸುವವರು ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧಿಗಳಾಗಿದ್ದಾರೆ. ನಮ್ಮ ಮಾದಿಗರಿಗೆ ನಿರಂತರ ಅನ್ಯಾಯವಾಗಿದೆ. ನ್ಯಾಯ ಕೊಡಿ, ಸಾಮಾಜಿಕ ನ್ಯಾಯ ಕಲ್ಪಿಸುವಂತೆ ಕೇಳುತ್ತಿದ್ದೇವೆ. ಒಳಮೀಸಲಾತಿ ಕಲ್ಪಿಸದೇ ರಾಜ್ಯದ 56432 ಹುದ್ದೆಗಳ ನೇಮಕಾತಿ ಕೈಗೊಳ್ಳಬಾರದು. ಒಳ ಮೀಸಲಾತಿ ಜಾರಿಯಾದ ಮೇಲೂ ಅದನ್ನು ಬಿಟ್ಟು ಮಾಡುತ್ತೇವೆ ಎನ್ನುವುದು ಯಾವ ನ್ಯಾಯ ಎಂದು ಎಚ್.ಆಂಜನೇಯ ಪ್ರಶ್ನಿಸಿದರು.
ಶಿಕ್ಷಣ, ಉದ್ಯೋಗದಲ್ಲಿ ಈಗ ಮಾದಿಗರಿಗೆ ಮೀಸಲಾತಿ ಸಿಗುತ್ತಿದೆ. ಒಳ ಮೀಸಲಾತಿಯಿಂದ ವೈದ್ಯಕೀಯ, ಎಂಜಿನಿಯರ್ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಅವಕಾಶ ಸಿಗುವಂತಾಗಿದೆ. ಅನಾಥವಾದ ಅಲೆಮಾರಿ ಸಮುದಾಯವನ್ನು ಬಿಟ್ಟು ಒಳ ಮೀಸಲಾತಿ ಕಲ್ಪಿಸುವುದು ಸರಿಯಲ್ಲ. ಅಲೆಮಾರಿ ಸಮುದಾಯ ನ್ಯಾಯಾಲಯದ ಮೆಟ್ಟಿಲೇರಿದ್ದು, ತೀರ್ಪು ಪರವೇ ಬರಲಿ, ವಿರುದ್ಧವೇ ಬರಲಿ, ಮೇಲ್ಮನವಿ ಸಲ್ಲಿಸಿ, ತಡೆಯಾಜ್ಞೆ ತರಲು ಸರ್ಕಾರ ಸಿದ್ಧವಾಗಿರಲಿ. ಶೇ.56 ಮೀಸಲಾತಿಗೆ ಬದ್ಧವೆಂದ ಸಿಎಂ ಸಿದ್ದರಾಮಯ್ಯ ಈಗ ಒಳ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಕೊಡಲಿ ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಸಮಾಜದ ಮುಖಂಡರಾದ ಎಸ್.ಮಲ್ಲಿಕಾರ್ಜುನ, ಎಸ್.ಎನ್.ಬಾಲಾಜಿ ಇತರರು ಇದ್ದರು.
- - -ಷೆಡ್ಯೂಲ್ 9ಕ್ಕೆ ಸೇರಿಸಲು ಕೇಂದ್ರದ ಬಳಿ ಸಿಎಂ ಸಿದ್ದರಾಮಯ್ಯ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯಲಿ. ಕಾನೂನಾತ್ಮಕವಾಗಿ ಸಂಸತ್ತಿನಲ್ಲಿ ಷೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡಿದ್ದನ್ನು ಅಂಗೀಕರಿಸಲು ಒತ್ತಡ ಹೇರಲಿ. ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವ ಬಿಜೆಪಿ ಸರ್ಕಾರ ಎಸ್ಸಿಗೆ ಶೇ.15 ಇದ್ದ ಮೀಸಲಾತಿಯನ್ನು ಶೇ.17ಕ್ಕೆ, ಎಸ್‌ಟಿಗೆ ಇದ್ದ ಶೇ.3ನ್ನು ಶೇ.7ಕ್ಕೆ ಹೆಚ್ಚಿಸಿತ್ತು. ಇದು ಸಂವಿಧಾನಾತ್ಮಕವಾಗಿ ಆಗಬೇಕೆಂದರೆ ಷೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡಬೇಕು.
- ಎಚ್.ಆಂಜನೇಯ, ಮಾದಿಗ ಸಮಾಜ ನಾಯಕ.- - -
ರಾಜ್ಯದಲ್ಲಿ 56432 ಹುದ್ದೆ ನೇಮಕವಾದರೆ ಎಸ್ಟಿಗೆ ಶೇ.7ರಂತೆ ಮೀಸಲಾತಿ ಸಿಕ್ಕರೆ 3750 ಹುದ್ದೆ ಸಿಗುತ್ತದೆ. ಶೇ.3 ಮೀಸಲಾತಿಯಾದರೆ ಕೇವಲ 1650 ಹುದ್ದೆ ಸಿಗುತ್ತವೆ. ಹಾಗಾಗಿ ಮೀಸಲಾತಿ ಕಡಿಮೆಯಾದರೆ ಯಾವುದೇ ಸಮಾಜಕ್ಕೆ ಅನ್ಯಾಯವಾಗುತ್ತದೆ. ಪರಿಶಿಷ್ಟ ಜಾತಿ-ಪಂಗಡಗಳು ಒಂದಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ. ಶೇ.24 ಮೀಸಲಾತಿ ಬಿಟ್ಟು, ಉಳಿದಂತೆ ಸಾಮಾನ್ಯ ವರ್ಗದವರ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ಕೈಗೊಳ್ಳಲು ಅಭ್ಯಂತರವಿಲ್ಲ.- ಎಚ್.ಆಂಜನೇಯ, ಮಾಜಿ ಸಚಿವ.