)
- ಮುತ್ತಿನಕೊಪ್ಪ ಏತ ನೀರಾವರಿ ಯೋಜನೆ ಕಾಮಗಾರಿಗೆ ₹30 ಕೋಟಿ ಬಿಡುಗಡೆಗೆ ಆಗ್ರಹ
ಕನ್ನಡಪ್ರಭ ವಾರ್ತೆ ದಾವಣಗೆರೆ/ಹೊನ್ನಾಳಿ
ತುಂಗಾ ನದಿಯಿಂದ ನೀರು ಹರಿಸುವ ಮುತ್ತಿನಕೊಪ್ಪ ಏತ ನೀರಾವರಿ ಯೋಜನೆ ಕಾಮಗಾರಿಗೆ ₹30 ಕೋಟಿ ಅನುದಾನ ಬಿಡುಗಡೆ ಮಾಡಿ, ದಾವಣಗೆರೆ ಭದ್ರಾ ಅಚ್ಚುಕಟ್ಟು ರೈತರ ಹಿತ ಕಾಯುವಂತೆ, ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ 91 ಕೆರೆಗಳನ್ನು ತುಂಬಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಲ ಸಂಪನ್ಮೂಲ ಸಚಿವ ಚಲುವರಾಯ ಸ್ವಾಮಿ ಅವರಿಗೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮುತ್ತಿನಕೊಪ್ಪ ಏತ ನೀರಾವರಿ ಯೋಜನೆ ದಾವಣಗೆರೆ ಜಿಲ್ಲೆಯ ರೈತರ ಬಹು ದಿನಗಳ ಬೇಡಿಕೆಯಾಗಿದೆ. ಇದಕ್ಕೆ ಅಗತ್ಯವಿರುವ ₹30 ಕೋಟಿ ಅನುದಾನ ಬಿಡುಗಡೆ ಮಾಡುವಂತೆ, ಯೋಜನೆಗೆ 17.40 ಟಿಎಂಸಿ ನೀರು ಹಂಚಿಕೆ ಮಾಡುವಂತೆ ಮನವಿ ಮಾಡಿದರು.
ಜಲ ಸಂಪನ್ಮೂಲ ಸಚಿವಗೂ ಮನವಿ:
ಶಿವಮೊಗ್ಗದ ತುಂಗಾ ಏತ ನೀರಾವರಿ ಯೋಜನೆ ಮೂಲಕ ಹೊನ್ನಾಳಿ ಕ್ಷೇತ್ರದ ಹನುಮಸಾಗರ ಕೆರೆ, ಗೋವಿನಕೋವಿ (ಕುರುವ) ಕೆರೆ, ಬೆನಕನಹಳ್ಳಿ ಹಾಗೂ ಕಮ್ಮಾರಗಟ್ಟೆ ಕೆರೆಗಳಿಗೆ ನೀರು ತುಂಬಿಸಬೇಕು. ಈ ಬೇಡಿಕೆಗಳನ್ನು ಈಡೇರಿಸಿದರೆ ಅವಳಿ ತಾಲೂಕಿನ ಸಾವಿರಾರು ರೈತರಿಗೆ ಅನುಕೂಲವಾಗುವ ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚಾಗಿ, ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಸುಧಾರಿಸಿ, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಬಲ ದೊರೆಯಲಿದೆ ಎಂದು ತಿಳಿಸಿದರು.
(-ಫೋಟೋ ಇದೆ.)