ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಾತಿ ಸಮೀಕ್ಷೆಯಲ್ಲಿ ಆದಿ ಕರ್ನಾಟಕ ಸಮುದಾಯದ ೨ ಲಕ್ಷ ಮಂದಿ ಉಪ ಜಾತಿ ಕಾಲಂ ಖಾಲಿ ಇದ್ದು, ನಿಖರವಾದ ಜಾತಿ ಗುರುತಿಸಲು ಸರ್ಕಾರ ಹಾಗೂ ನ್ಯಾ.ನಾಗಮೋಹನ್ ದಾಸ್ ಆಯೋಗ ಮುಂದಾಗಬೇಕು ಎಂದು ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಒತ್ತಾಯಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಇದುವರೆಗೆ ನಡೆದಿರುವ ಮೀಸಲಾತಿ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಆದಿ ಕರ್ನಾಟಕ ಎಂದು ನಮೂದಿಸಿದ್ದು, ಉಪ ಜಾತಿ ಕಾಲಂ ಅನ್ನು ಖಾಲಿ ಬಿಟ್ಟಿರುವುದು ತಿಳಿದು ಬಂದಿದೆ. ಇದರಿಂದ ಒಳ ಮೀಸಲಾತಿ ನೀಡುವಾಗ ಗೊಂದಲವಾಗುತ್ತದೆ. ಜೊತೆಗೆ ನಾಗಮೋಹನ್ ದಾಸ್ ಅವರ ವರದಿಯನ್ವಯ ಮೀಸಲಾತಿಯನ್ನು ವರ್ಗೀಕರಣ ಮಾಡುವುದು ಕಷ್ಟಸಾಧ್ಯವಾಗುತ್ತಿದೆ. ಹೀಗಾಗಿ ಮೊದಲು ಉಪ ಜಾತಿಗಳನ್ನು ನಿಖರವಾಗಿ ದಾಖಲು ಮಾಡುವ ಕೆಲಸವಾಗಬೇಕು. ಈಗ ಕೈ ಬಿಟ್ಟಿರುವ ೨ ಲಕ್ಷ ಜನರ ಉಪ ಜಾತಿಯನ್ನು ಗುರುತಿಸಬೇಕು ಎಂದು ಆಗ್ರಹಿಸಿದರು. ಆದಿ ಕರ್ನಾಟಕ ಎಂಬುವುದು ಸಮುದಾಯ ಮತ್ತು ಗುಂಪು ಗುರುತಿಸುವ ಪದವಾಗಿದೆ. ಇದರಲ್ಲಿ ಉಪ ಜಾತಿ ಯಾವುದು ಎನ್ನುವುದನ್ನು ಸಮುದಾಯದ ಬಂಧುಗಳು ಸ್ವ ಪ್ರೇರಿತರರಾಗಿ ಬರೆಸಬೇಕು. ಇನ್ನು ಸಹ ಸಾಕಷ್ಟ ಕಾಲವಕಾಶ ಇದ್ದು, ಉಪ ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಹೊಲೆಯ ಎಂದು ಬರೆಸುವ ಮೂಲಕ ನಮ್ಮ ಮುಂದಿನ ಪೀಳಿಗೆಯವರ ಭವಿಷ್ಯಕ್ಕಾಗಿ ಈಗಲೇ ಚಿಂತನೆ ಮಾಡಬೇಕಾಗಿದೆ. ನಾಗಮೋಹನ್ ದಾಸ್ ಅವರ ಸಮಿತಿಯವರು ಜಾತಿ ಸಮೀಕ್ಷೆ ಮಾಡಲು ಸರ್ಕಾರಕ್ಕೆ ಒತ್ತಡ ತಂದು ಮತ್ತೊಮ್ಮೆ ನಿಖರವಾದ ಅಂಕಿ-ಅಂಶಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿಯೂ ಸಹ ನಮ್ಮ ಸಮುದಾಯದವರು ತಾತ್ಸಾರ ಮಾಡಿದರೆ, ಅದರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಪಾಪು ಎಚ್ಚರಿಕೆ ನೀಡಿದರು. ಅಲ್ಲದೇ ಜಾತಿ ಕಾಲಂನಲ್ಲಿ ಆದಿ ಕರ್ನಾಟಕ ಬರೆಸಿ, ಉಪ ಜಾತಿ ಕಾಲಂನಲ್ಲಿ ನಮೂದಿಸಲು ನಿರಾಕರಣೆ ಮಾಡುತ್ತಿರುವವರ ವಿರುದ್ಧವು ಸಹ ತನಿಖೆಯಾಗಬೇಕಾಗಿದೆ. ಇಂಥವರು ಸುಳ್ಳು ಜಾತಿ ನೀಡಿ, ಸರ್ಕಾರ ಮತ್ತು ಸಮುದಾಯಕ್ಕೆ ವಂಚನೆ ಮಾಡುತ್ತಿದ್ದಾರೆ. ಇಂಥವರ ವಿರುದ್ಧ ನಾಗಮೋಹನ್ ದಾಸ್ ನೇತೃತ್ವದ ತಂಡ ಕಠಿಣ ಕ್ರಮ ವಹಿಸಬೇಕು. ಇಂಥವರ ಹೆಸರು ಬಹಿರಂಗ ಪಡಿಸಿದರೆ ನಾವು ಅವರನ್ನು ವಿಚಾರಿಸಿಕೊಳ್ಳುತ್ತೇವೆ. ಉಪ ಜಾತಿ ಕಾಲಂನಲ್ಲಿ ನಮೂದಿಸಲು ಏಕೆ ಹಿಂಜರಿಕೆ ಎಂಬುವುದನ್ನು ಪತ್ತೆ ಮಾಡುತ್ತೇವೆ. ಉಪ ಜಾತಿ ಕಾಲಂ ಖಾಲಿ ಬರೆಸಿದವರ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಪಾಪು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಕಾಳಿಚರಣ್, ಉಮೇಶ್ ಹಾಜರಿದ್ದರು.