ಜಲಾಶಯಕ್ಕೆ 3 ದಿನದೊಳಗೆ ನೀರು ತುಂಬಿಸಿ: ರೈತ ಸಂಘ

KannadaprabhaNewsNetwork | Published : Aug 20, 2024 12:49 AM

ಸಾರಾಂಶ

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿಯಿಂದ ಇನ್ನು ಮೂರು ದಿನದೊಳಗೆ ನೀರು ತುಂಬಿಸಬೇಕು. ಇಲ್ಲದಿದ್ದರೆ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಹನೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ.

ಗುಂಡಾಲ್‌ ಅಣೆಕಟ್ಟಿಗೆ ಕಾವೇರಿ ನೀರು ತರಲು ರಾಜ್ಯ ಸಂಘದ ಹೊನ್ನೂರು ಬಸವಣ್ಣ ಆಗ್ರಹ । ರೈತರ ಕುಂದುಕೊರತೆ ಸಭೆ

ಕನ್ನಡಪ್ರಭ ವಾರ್ತೆ ಹನೂರು

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿಯಿಂದ ಇನ್ನು ಮೂರು ದಿನದೊಳಗೆ ನೀರು ತುಂಬಿಸಬೇಕು. ಇಲ್ಲದಿದ್ದರೆ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಎಚ್ಚರಿಕೆ ನೀಡಿದರು.

ಹನೂರು ಪಟ್ಟಣದ ಸೆಸ್ಕಾಂ ಕಚೇರಿ ಮುಂಭಾಗ ರೈತರ ಸಮಸ್ಯೆಗಳ ಬಗ್ಗೆ ಕರೆಯಲಾಗಿದ್ದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಎರಡು ತಿಂಗಳಿನಿಂದ ಕೇರಳದ ವೈನಾಡು ಹಾಗೂ ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿಯಾಗಿ ಹರಿದು ಬರುತ್ತಿರುವ ಸಾವಿರಾರು ಕ್ಯೂ ಸೆಕ್ಸ್ ನೀರು ತಮಿಳುನಾಡಿಗೆ ಹರಿದು ಹೋಗಿ ಮೇಟೂರು ಜಲಾಶಯವು ಭರ್ತಿಯಾಗಿ ಹೆಚ್ಚುವರಿ ನೀರು ಸಮುದ್ರಕ್ಕೆ ಸೇರುತಿದೆ, ಆದರೆ ನಮ್ಮ ಅಧಿಕಾರಿಗಳ ನಿರ್ಲಕ್ಷದಿಂದ ಗುಂಡಲ್ ಜಲಾಶಯಕ್ಕೆ ನೀರು ತುಂಬಿಸದೆ ಇರುವುದರಿಂದ ರೈತರಿಗೆ ತೊಂದರೆಯಾಗಿದೆ. ಇನ್ನು ಮೂರು ದಿನದೊಳಗೆ ಗುಂಡಾಲ್ ಜಲಾಶಯಕ್ಕೆ ನೀರು ಬಿಡಬೇಕು ಇಲ್ಲದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಕಾವೇರಿ ನೀರಾವರಿ ನಿಗಮದ ಎಇಇ ರಮೇಶ್ ಮಾತನಾಡಿ, ಗುಂಡಲ್ ಜಲಾಶಯಕ್ಕೆ ನೀರು ಪೂರೈಕೆ ಮಾಡುವ ಟಿಸಿ ದುರಸ್ತಿಯಾಗಿತ್ತು, ಈಗಾಗಲೇ ದುರಸ್ತಿಗೆ ಹೈದರಾಬಾದ್ ಗೆ ಕಳಿಸಲಾಗಿದೆ. ಇನ್ನೆರಡು ದಿನದಲ್ಲಿ ಟಿಸಿ ದುರಸ್ತಿಯಾಗಿ ಬಂದ ನಂತರ ಗುಂಡಾಲ್ ಜಲಾಶಯಕ್ಕೆ ಕೂಡಲೇ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.

ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪ್ರತಿಭಟನೆ

ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ ಸಕಾಲದಲ್ಲಿ ಇಲ್ಲಿನ ಅಧಿಕಾರಿಯ ಸಿಬ್ಬಂದಿ ವರ್ಗದವರು ರೈತರಿಗೆ ಸ್ಪಂದಿಸದೆ ಇರುವುದರಿಂದ ಟ್ರಾನ್ಸ್‌ಫಾರಂ ದುರಸ್ತಿಯಾದರೆ ವಿಳಂಬ ಧೋರಣೆ ಆಗುತ್ತಿದೆ ಮತ್ತು ವಿದ್ಯುತ್ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ, ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಮಸ್ಯೆ ಬಗೆ ಹರಿಸಬೇಕೆಂದು ಸೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಎಇಇ ಶಂಕರ್ ಮಾತನಾಡಿ, ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿನ ವಿದ್ಯುತ್ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ, ಪಿಜಿ ಪಾಳ್ಯ ವಿದ್ಯುತ್ ಪರಿವರ್ತಕದ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಸಂಘ ಪುನರ್‌ ರಚನೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕವನ್ನು ಪುನರ್ ರಚಿಸಲಾಯಿತು.

ಅಧ್ಯಕ್ಷರಾಗಿ ಮಲ್ಲಯ್ಯನಪುರ ಚಿಕ್ಕರಾಜು, ಕಾರ್ಯದರ್ಶಿಯಾಗಿ ಪವನ್ ಕುಮಾರ್, ಉಪಾಧ್ಯಕ್ಷರಾಗಿ ಲೊಕ್ಕನಹಳ್ಳಿ ಪ್ರಕಾಶ್, ಖಜಾಂಚಿಯಾಗಿ ಗೌಡಳ್ಳಿ ಸೋಮಣ್ಣ ರವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಾಜಿಪುರ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಗ್ಗೊಠಾರ ವಿಜಯ್ ಕುಮಾರ್ , ಮಹದೇವಸ್ವಾಮಿ ಗೌಡಳ್ಳಿ ಸೋಮಣ್ಣ, ಹನೂರು ತಾಲೂಕು ಅಧ್ಯಕ್ಷ ಚಿಕ್ಕರಾಜು, ಪಿಜಿ ಪಾಳ್ಯ ಪ್ರಸನ್ನ ಹಾಜರಿದ್ದರು.

Share this article