ವಿವಿ ಸಾಗರದಿಂದ ಚಳ್ಳಕೆರೆ ತಾಲೂಕಿನ ಕೆರೆಗಳ ತುಂಬಿಸಿ

KannadaprabhaNewsNetwork |  
Published : Apr 25, 2026, 01:15 AM IST
ಟಿ.ರಘುಮೂರ್ತಿ  | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಶಾಸಕ ರಘುಮೂರ್ತಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಳೆ ಅಭಾವದ ಹಿನ್ನಲೆ ಅಂತರ್ಜಲ ಕುಸಿತದಿಂದ ಜನ ಜಾನುವಾರುಗಳಿಗೆ ತೊಂದರೆಯಾಗಿದ್ದು ಪ್ರಾದೇಶಿಕ ಆಯುಕ್ತರ ಅನುಮತಿ ಪಡೆದು ವಾಣಿ ವಿಲಾಸ ಸಾಗರ ಜಲಾಶಯದಿಂದ ಚಳ್ಳಕೆರೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಪ್ರದೇಶಗಳಲ್ಲಿ ಅಧಿಕಾರಿಗಳು ಕೂಡಲೇ ಸ್ಪಂದಿಸಿ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಸೂಚಿಸಿದರು.

ಹಿರಿಯೂರು ತಾಲೂಕಿನ ದಿಂಡಾವರ, ಕರಿಯಾಲ ಹಾಗೂ ಜೆಜೆ ಹಳ್ಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಪತ್ರಿಕಾ ವರದಿಗಳು ಪ್ರಕಟವಾಗಿವೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು. ಜಲ ಜೀವನ್ ಮಿಷನ್ ಅಡಿ ಕಾಮಗಾರಿ ಪೂರ್ಣಗೊಂಡು ಕಾರ್ಯಾಚರಣೆ ಸಿದ್ಧವಿರುವ ಹಳ್ಳಿಗಳಲ್ಲಿ ಕೂಡಲೇ ಓವರ್ ಹೆಡ್ ಟ್ಯಾಂಕ್‌ಗಳನ್ನು ಭರ್ತಿ ಮಾಡಿ ನೀರು ಸರಬರಾಜಿಗೆ ಚಾಲನೆ ನೀಡಬೇಕು.

ಗ್ರಾಮೀಣ ಭಾಗದಲ್ಲಿ ಸಾಕಷ್ಟು ಆರ್‌ಓ ಪ್ಲಾಂಟ್‌ಗಳು ಕಾರ್ಯನಿರ್ವಹಿಸದೇ ಶಿಥಿಲಗೊಂಡಿವೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಂಜಿಯುರ್‌ಗಳು ಹಾಗೂ ತಾಲೂಕು ಪಂಚಾಯಿತಿ ಇಒಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಆರ್.ಓ ಪ್ಲಾಂಟ್‌ಗಳ ದುರಸ್ಥಿ ಕ್ರಮ ವಹಿಸಬೇಕು ಎಂದರು.

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಹೊಸದುರ್ಗ ತಾಲೂಕಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಇರುವ 4 ಗ್ರಾಮಗಳು ಹಾಗೂ ಸಮಸ್ಯೆ ತಲೆದೊರಬಹುದಾದ 9 ಗ್ರಾಮಗಳಲ್ಲಿ ಹೊಸ ಬೋರ್‌ವೆಲ್ ಅಥವಾ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಬೇಕು. ಹೊಸದುರ್ಗ ಪಟ್ಟಣಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ ವಿತರಣೆ ಜಾಲ ಹಾಗೂ ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಕೃತಕ ಅಭಾವ ಉಂಟಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಚಿತ್ರದುರ್ಗ ನಗರಕ್ಕೆ ಸಮೀಪವಿರುವ ಮದಕರಿಪುರಕ್ಕೆ ನಗರದ ಕುಡಿಯುವ ನೀರಿನ ಸಂಪರ್ಕ ಜಾಲದಿಂದ ನೀರು ಒದಗಿಸಬೇಕು. ನಗರದಲ್ಲಿ ಒಟ್ಟು 19 ಆರ್.ಓ ಪ್ಲಾಂಟ್‌ಗಳಿದ್ದು, ಇದರಲ್ಲಿ 3 ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 16 ಸ್ಥಗಿತವಾಗಿವೆ. ನಗರಸಭೆ ಅಧಿಕಾರಿಗಳು ಒಂದು ವಾರದಲ್ಲಿ ಆರ್.ಓ ಪ್ಲಾಂಟ್‌ಗಳನ್ನು ನಿರ್ಮಿಸಿ, ನಿರ್ವಹಣೆ ಮಾಡುವ ಮಾದರಿಯಲ್ಲಿ ಖಾಸಗಿಯವರಿಗೆ ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಎಲ್ಲಾ ತಾಲೂಕು ಪಂಚಾಯತ್ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ವಿಪತ್ತು ನಿರ್ವಹಣಾ ಕೋಶ ತೆರೆಯಬೇಕು. ದಿನದ 24 ಗಂಟೆಯೂ ಈ ಕೇಂದ್ರಗಳು ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು ಮೀಸಲಾದ ಹೆಲ್ಪ್ಲೈನ್ ಸಂಖ್ಯೆಗಳನ್ನು ಮಾಧ್ಯಮಗಳ ಮೂಲಕ ಪ್ರಕಟಿಸಬೇಕು. ಜಿಲ್ಲಾ ಪಂಚಾಯಿತಿಗೆ ‘ಗ್ರಾಮ ಫೋನ್’ ಮೂಲಕ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಒಟ್ಟು 273 ಆರ್.ಓ ಪ್ಲಾಂಟ್‌ಗಳಿದ್ದು ಅವುಗಳಲ್ಲಿ 68 ಘಟಕಗಳು ದುರಸ್ಥಿಗೆ ಬಂದಿವೆ. ಇವುಗಳನ್ನು ಶೀಘ್ರವಾಗಿ ಸರಿಪಡಿಸಲು 46 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ಫಿಲ್ಟರ್‌ಗಳನ್ನು ಸರಿಪಡಿಸಲಾಗಿದೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಮರನಾಥ್ ಜೈನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸೇರಿದಂತೆ ತಹಸೀಲ್ದಾರರು, ತಾಪಂ ಇಒಗಳು, ವಿವಿಧ ನಗರಸಭೆಗಳ ಪೌರಾಯುಕ್ತ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಸಾಂಸ್ಕೃತಿಕ ಲೋಕದ ಧೃವತಾರೆ ಡಾ.ರಾಜ್‌
ಒಕ್ಕಲಿಗ, ವೀರಶೈವ ಲಿಂಗಾಯತರಿಗೆ ಅನ್ಯಾಯವಾದರೆ ಸಹಿಸಲ್ಲ