ಪಾರಂಪರಿಕ ಕಟ್ಟುಪಾಡು ಗೌರವಿಸಿ ‘ವೀರ ಚಂದ್ರಹಾಸ’ ಚಿತ್ರೀಕರಣ: ರವಿ ಬಸ್ರೂರು

KannadaprabhaNewsNetwork | Published : Apr 7, 2025 12:31 AM

ಸಾರಾಂಶ

ವೀರಚಂದ್ರಹಾಸ ಸಿನಿಮಾದ ಬಿಡುಗಡೆ ಏ.೧೮ರಂದು ನಡೆಯಲಿದೆ ಎಂದು ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಅಂದಾಜು ೯ ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ವೀರ ಚಂದ್ರಹಾಸ ಸಿನಿಮಾಕ್ಕೆ ೩೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿ ಎಲ್ಲಾ ಪಾರಂಪರಿಕ ಕಟ್ಟುಪಾಡುಗಳನ್ನು ಅತ್ಯಂತ ಗೌರವದಿಂದ ಪಾಲಿಸಲಾಗಿದೆ. ೨.೩೫ ಗಂಟೆ ಅವಧಿ ಹೊಂದಿರುವ ಚಿತ್ರದಲ್ಲಿ ಯಕ್ಷಗಾನಕ್ಕೆ ಅಗೌರವವಾಗುವಂತ ಒಂದೇ ಒಂದು ಸನ್ನಿವೇಶಗಳನ್ನು ತಂದಿಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದ್ದಾರೆ.

ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದ ವಠಾರದಲ್ಲಿ ಭಾನುವಾರ ವೀರಚಂದ್ರಹಾಸ ಸಿನಿಮಾದ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ ಅವರು ಮಾತನಾಡಿದರು.

ಯಕ್ಷಗಾನದ ಪಂಜು ಹಾಗೂ ದೊಂದಿಗಳನ್ನೇ ಬಳಸಿ ಆಕರ್ಷಕವಾಗಿ ಪರಂಪರೆ ಉಳಿಸಿಕೊಳ್ಳಲಾಗಿದೆ. ೧೬೦೦ ರಿಂದ ೧೭೦೦ ರಷ್ಟು ಟ್ರ್ಯಾಕ್‌ ಕೇವಲ ಚಂಡೆ-ಮದ್ದಳೆಗಳ ವಾದನದಲ್ಲಿಯೇ ಅದ್ಭುತವಾಗಿ ಕೇಳಿ ಬಂದಿದೆ. ಯಾವ ವಾದ್ಯ ಪರಿಕರಗಳಲ್ಲಿಯೂ ಕೇಳಿಸದೆ ಇರುವ ಹಾಗೂ ಊಹೆ ಮಾಡಲು ಕಷ್ಟ ಎನ್ನುವಂತೆ ಶ್ರೋತೃಗಳ ಕರ್ಣಾಲಿಗಳನ್ನು ತಲುಪುವ ಚಂಡೆ ಹಾಗೂ ಮದ್ದಳೆಯ ಶಬ್ದ ಸಿನಿಮಾ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನು ಬರೆಯುವ ನಿರೀಕ್ಷೆ ಇದೆ ಎಂದರು.

ಕನ್ನಡ ಚಿತ್ರರಂಗದ ಹಿರಿಯ ನಟ ಡಾ.ಶಿವರಾಜ್ ಕುಮಾರ್ ಅವರು ಶಿವಪುಟ್ಟಸ್ವಾಮಿ ಎನ್ನುವ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಕಲಾವಿದರಾದ ಚಂದನ್ ಶೆಟ್ಟಿ, ಗರುಡ ರಾಮ್, ಪುನೀತ್ ರುದ್ರನಾಗ್ ಹಾಗೂ ಪ್ರಣವ್ ಸೂರ್ಯ ಅವರು ಯಕ್ಷಗಾನ ವೇಷಭೂಷಣಗಳೊಂದಿಗೆ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಬಹುನಿರೀಕ್ಷಿತ ‘ವೀರಚಂದ್ರಹಾಸ’ ಸಿನಿಮಾವನ್ನು ೧೮ ರಂದು ಏಕಕಾಲದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಬಿಡುಗಡೆ ಮಾಡಲಾಗುವುದು. ಆಯೋಜಕ ನಾಗರಾಜ್ ಶೆಟ್ಟಿ ನೈಕಂಬ್ಳಿ, ನವೀನ್ ಶೆಟ್ಟಿ ಐರ್ಬೈಲ್, ರಾಜೇಶ್ ಕೊಂಡಳ್ಳಿ ಅವರ ಸಹಕಾರದಲ್ಲಿ ಮೂಡಿ ಬಂದಿರುವ ಚಿತ್ರದಲ್ಲಿ ನಾಯಕ, ಖಳ ನಾಯಕ, ಹಾಸ್ಯ ಸೇರಿದಂತೆ ಬಹುತೇಕ ಪಾತ್ರಗಳನ್ನು ವೃತ್ತಿಪರ ಯಕ್ಷಗಾನ ಕಲಾವಿದರೇ ನಿರ್ವಹಿಸಿದ್ದಾರೆ. ಸುಮಾರು ೪೦೦ ರಿಂದ ೫೦೦ ಪಾತ್ರಧಾರಿಗಳು ಸಿನಿಮಾದ ದೃಶ್ಯಾವಳಿಗಳಲ್ಲಿ ಅಭಿನಯಿಸಿದ್ದಾರೆ ಎಂದರು.

ಪ್ರಸಿದ್ಧ ಭಾಗವತರಾದ ಪಟ್ಲ, ಜನ್ಸಾಲೆ, ಮೊಗೆಬೆಟ್ಟು, ಚಿನ್ಮಯಿ, ಬಿಲ್ಲಾಡಿ ಮುಂತಾದವರು ಹಿನ್ನೆಲೆ ಗಾಯನದಲ್ಲಿ ರಸದೌತಣ ನೀಡಿದ್ದಾರೆ. ಶಿವಾನಂದ ಕೋಟ, ಸುಜನ, ಸುನೀಲ್ ಭಂಡಾರಿ, ವಿಶ್ವಂಭರ ಅಲ್ಸೆ, ಕೌಶಿಕ್ ರಾವ್, ಚೈತನ್ಯ ಪದ್ಯಾಣ ಮುಂತಾದವರು ಚಂಡೆ-ಮದ್ದಳೆ ವಾದನ ನೀಡಿದ್ದಾರೆ. ಹಿರಿಯ ಕಲಾ ನಿರ್ದೇಶಕ ಪ್ರಭಾ ಬಡಗೇರ ಕಲಾ ನಿರ್ದೇಶನ ನೀಡಿದ್ದಾರೆ. ವೇಷ ಕಟ್ಟುವವರು ಹಾಗೂ ಬಣ್ಣ ಹಚ್ಚುವವರು ಸೇರಿ ನೂರಾರು ಮಂದಿ ಕಲಾವಿದರು ಹಾಗೂ ತಂತ್ರಜ್ಞರನ್ನು ಶೂಟಿಂಗ್ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಹೊಂಬಾಳೆ ಫಿಲ್ಮ ಸಂಸ್ಥೆಯವರು ಚಿತ್ರದ ಒಟ್ಟಾರೆ ನಿರ್ಮಾಣದಲ್ಲಿ ಸ್ಮರಣೀಯ ಸಹಕಾರ ನೀಡಿದ್ದಾರೆ ಎಂದರು.

ನಾಯಕ ನಟ ಶಿಥಿಲ್ ಕುಮಾರ ಶೆಟ್ಟಿ, ಆಯೋಜಕರಾದ ನಾಗರಾಜ್ ಶೆಟ್ಟಿ ನೈಕಂಬಳ್ಳಿ, ಕಲಾವಿದರಾದ ನವೀನ್ ಶೆಟ್ಟಿ ಐರ್ಬೈಲ್, ಪ್ರಸನ್ನ ಶೆಟ್ಟಿಗಾರ್, ಭಾಗವತ ಪ್ರಸಾದ್ ಕುಮಾರ ಮೊಗೆಬೆಟ್ಟು ಇದ್ದರು...............ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡುವಂತೆ ಕೇಳಲಾಗಿದೆ. ರಾಜ್ಯದ ವಿದ್ಯಾರ್ಥಿಗಳಿಗೆ ಈ ಸಿನಿಮಾ ನೋಡುವ ಅವಕಾಶ ಮಾಡಿಕೊಡುವಂತೆ ವಿನಂತಿಸಲಾಗಿದೆ. ಯಕ್ಷಗಾನ ತರಬೇತಿ ಕೇಂದ್ರ, ಅಧ್ಯಯನ ಕೇಂದ್ರ, ಪಠ್ಯ ಸೇರಿದಂತೆ ಯಕ್ಷಗಾನ ಕ್ಷೇತ್ರದ ಕಲಾವಿದರು ಹಾಗೂ ಕ್ಷೇತ್ರದ ಬೆಳೆವಣಿಗೆಗೆ ಪೂರಕವಾಗಿ ಬೇಡಿಕೆಯ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರವಿ ಬಸ್ರೂರು ಹೇಳಿದರು.

Share this article