ಕನ್ನಡಪ್ರಭ ವಾರ್ತೆ ಮಡಿಕೇರಿಲೋಕಸಭೆ ಚುನಾವಣೆ ಹಿನ್ನೆಲೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿಶೇಷ ಅಭಿಯಾನ ಮೂಲಕ ಯುವ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ನಮೂನೆ-6, ನಮೂನೆ-7 ಮತ್ತು ನಮೂನೆ-8ರಲ್ಲಿ ಯುವ ಮತದಾರರ ಸೇರ್ಪಡೆ ಮತ್ತಿತರ ಕಾರ್ಯಗಳನ್ನು ಬಿಎಲ್‌ಒ ಮೂಲಕ ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ ಎಂದರು.ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ನಿರಂತರ ಪ್ರಕ್ರಿಯೆಯಾಗಿದ್ದು, ಯುವ ಮತದಾರರು ಹೆಸರು ಸೇರ್ಪಡೆ ಮಾಡಬಹುದಾಗಿದೆ. ಸದ್ಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸಂಬಂಧಿಸಿದಂತೆ ವೋಟರ್ ಆ್ಯಪ್ ಮೂಲಕ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ ಎಂದರು.
ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 546 ಮತಗಟ್ಟೆಗಳಿದ್ದು, ಒಟ್ಟು 4,63,414 ಮತದಾರರು ಇದ್ದಾರೆ. ಅದರಲ್ಲಿ 2,27,339 ಪುರುಷ ಮತದಾರರು, 2,36,059 ಮಹಿಳಾ ಮತದಾರರು ಇದ್ದಾರೆ. 16 ಮಂದಿ ಇತರ ಮತದಾರರು ಇದ್ದಾರೆ. ವಿಧಾನಸಭಾ ಕ್ಷೇತ್ರವಾರು ಗಮನಿಸಿದಾಗ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, ಒಟ್ಟು 2,35,139 ಮತದಾರರು ಇದ್ದಾರೆ. ಇವರಲ್ಲಿ 1,14,580 ಪುರುಷ ಮತದಾರರು, 1,20,550 ಮಹಿಳಾ ಮತದಾರರು ಹಾಗೂ 9 ಮಂದಿ ಇತರೆ ಮತದಾರರು ಇದ್ದಾರೆ.ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, ಒಟ್ಟು 2,28,275 ಮಂದಿ ಮತದಾರರು ಇದ್ದಾರೆ. ಇವರಲ್ಲಿ 1,12,759 ಪುರುಷ ಮತದಾರರು, 1,15,509 ಮಹಿಳಾ ಮತದಾರರು ಹಾಗೂ 7 ಮಂದಿ ಇತರೆ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಹಿತಿ ನೀಡಿದರು.* ಪರಿಷ್ಕರಣೆ ನಿರಂತರಪ್ರಸ್ತುತ ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ನಡೆಯುತಿದ್ದು, ಈ ಅವಧಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-7ರಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8 ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ಎರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ನಮೂನೆ-6, 6ಎ, 7 ಮತ್ತು 8ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆ್ಯಪ್ ಹಾಗೂ https://voters.eci.gov.in/ / VOTERS’ SERVICE PORTAL ಮೂಲಕ ಆನ್‌ಲೈನ್‌ನಲ್ಲಿ ನೇರವಾಗಿ ಸಲ್ಲಿಸಬೇಕಿದೆ ಎಂದು ವೆಂಕಟ್ ರಾಜಾ ತಿಳಿಸಿದರು.* ಮಾಹಿತಿಗೆ ಮೊಬೈಲ್ ಆ್ಯಪ್
ಮತದಾರರ ಪಟ್ಟಿ ಮತ್ತು ಚುನಾವಣೆಯ ಕುರಿತು ಮತದಾರರಿಗೆ ಮಾಹಿತಿ ನೀಡುವ ಸಲುವಾಗಿ ಭಾರತ ಚುನಾವಣಾ ಆಯೋಗವು ಮತದಾರರ ಸಹಾಯವಾಣಿ ಆ್ಯಪ್ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದ್ದು, ಎಲ್ಲಾ ಮತದಾರರು / ನಾಗರೀಕರು ತಮ್ಮ ಮೊಬೈಲ್‌ನಲ್ಲಿ ಮತದಾರರ ಸಹಾಯವಾಣಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕೋರಿದರು.